ಶಕುಂತಲ ಜಯದೇವ ಶರಣ ಪ್ರಶಸ್ತಿ ಪ್ರದಾನ

Published on

ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ನಗರ ಘಟಕ ವತಿಯಿಂದ ನಗರದ ಎಂಜಿ ರಸ್ತೆಯ ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಶಕುಂತಲ ಜಯದೇವ ಶರಣ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.

ಸಿಎಫ್‌ಟಿಆರ್‌ಐ ನಿವೃತ್ತ ಸಹಾಯಕ ಸಂಶೋಧಕ, ಸಮಾಜಸೇವಕ ಎಸ್. ಮಹದೇವಯ್ಯ, ಮೈಸೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕಿ, ಸಾಹಿತಿ ಡಾ.ಎಂ.ಎಸ್. ವೇದಾ ಅವರಿಗೆ ಶಕುಂತಲ ಜಯದೇವ ಶರಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ನುಡಿಗಳನ್ನು ಆಡಿದ ಕೆ.ಆರ್. ನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಧ್ಯಾಪಕ ಪ್ರೊ. ಮೈಸೂರು ಕೃಷ್ಣಮೂರ್ತಿ, ಎಸ್. ಮಹದೇವಯ್ಯ ಹಾಗೂ ಡಾ.ಎಂ.ಎಸ್. ವೇದಾ ತಮ್ಮ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ತೋರಿದ್ದಾರೆ. ಸಾಧನೆಗೆ ಮೆಚ್ಚುಗೆ, ಪ್ರೋತ್ಸಾಹದ ಅವಶ್ಯಕತೆ ಇದೆ. ಹಾಗಾಗಿ ಅರ್ಹರನ್ನು ಗುರುತಿಸಿ ಶಕುಂತಲ ಜಯದೇವ ಶರಣ ಪ್ರಶಸ್ತಿ ಪ್ರದಾನ ಮಾಡಿರುವುದು ಸಂತಸದ ಸಂಗತಿ. ಖ್ಯಾತ ಕವಿ ವಿಲಿಯಂ ಶೇಕ್ಸ್‌ಪಿಯರ್‌ಗೆ ಪ್ರಾರಂಭದಲ್ಲಿ ಸೂಕ್ತ ಪ್ರೋತ್ಸಾಹ ದೊರೆಯದೆ ಇದ್ದಾಗ ಸ್ವತಃ ಶೇಕ್ಸ್‌ಪಿಯರ್ ಬೇಸರ ವ್ಯಕ್ತಪಡಿಸಿದ್ದರು. ಆ ನಂತರ ಅವರಿಗೆ ಸಮಾಜದಿಂದ ದೊರೆತ ಪ್ರೋತ್ಸಾಹದಿಂದ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದರು ಎಂದರು.

ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋಮಶೇಖರ, ನಗರಾಧ್ಯಕ್ಷ ಮ.ಗು. ಸದಾನಂದಯ್ಯ, ದತ್ತಿದಾನಿ ಡಾ.ಶಕುಂತಲ ಜಯದೇವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net