

ಮಂಡ್ಯ: ಶಕ್ತಿ ಯೋಜನೆ ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡಿದ ಮೊದಲು ಉಡುಗೊರೆ. ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಜನಪರ ಕಾರ್ಯಕ್ರಮ ಕೊಟ್ಟಿದ್ದೇವೆ. ಸ್ವಾತಂತ್ರ್ಯದ ಬಳಿಕ ಇಂತಹ ಯೋಜನೆ ಕೊಟ್ಟಿರುವುದು ನಮ್ಮ ಸರ್ಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣಾ ಸಮಯದಲ್ಲಿ ಈ ಯೋಜನೆ ಬಗ್ಗೆ ಹೇಳಿದಾಗ ಕೊಟ್ಟಾಗ ನೋಡೋಣ ಎನ್ನುವ ಮಾತು ಕೇಳಿಬರುತ್ತಿತ್ತು. ಆದರೆ ಈಗ ನುಡಿದಂತೆ ನಡೆದುಕೊಂಡಿದ್ದೇವೆ. ಶಕ್ತಿ ಯೋಜನೆ ಸಾಮಾನ್ಯದಲ್ಲ. ನಮ್ಮ ಯೋಜನೆ ಮಹಿಳೆಯರಿಗಷ್ಟೇ ಅಲ್ಲದೆ ಪುರುಷರಿಗೂ ಅನುಕೂಲವಾಗಲಿದೆ. ಖರ್ಚಿನ ಭಾರ ಕಡಿಮೆಯಾಗಿರುವುದನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು ಎಂದರು.
ಇನ್ನು ಬಸ್‌ನಲ್ಲಿ ನಿರ್ವಾಹಕರು ಮಹಿಳೆಯರೊಂದಿಗೆ ಸೌಜನ್ಯವಾಗಿ ವರ್ತಿಸಬೇಕು. ಅವರಿಗೆ ನೀಡುವ ಉಚಿತ ಪ್ರಯಾಣದ ವೆಚ್ಚವನ್ನು ಸರ್ಕಾರ ಭರಿಸಲಿದೆ. ಬಸ್‌ಗಳನ್ನು ಮಹಿಳೆಯರು ಹೆಚ್ಚು ಇರುವ ಸ್ಥಳದಲ್ಲಿ ನಿಲುಗಡೆ ಮಾಡದಿರುವುದು, ಅನುಚಿತವಾಗಿ ವರ್ತಿಸುವ ಬಗ್ಗೆ ದೂರುಗಳು ಬಂದರೆ ಕ್ರಮ ವಹಿಸಲಾಗುವುದು. ಮಂಡ್ಯದಿಂದ ರಾಮನಗರ ಹಾಗೂ ಮಂಡ್ಯದಿಂದ ಮೈಸೂರಿಗೆ ಶಟಲ್ ಬಸ್‌ಗಳು ಇಲ್ಲದಿದ್ದರೆ ವ್ಯವಸ್ಥೆ ಮಾಡುವಂತೆ ಹಾಗೂ ಮಂಡ್ಯ ಬಸ್ ನಿಲ್ದಾಣದ ನವೀಕರಣ ಕುರಿತಂತೆ ಪ್ರಸ್ತಾವನೆ ಸಲ್ಲಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತಿಳಿಸಿದರು.
ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ರಾಜ್ಯದ ಮಹಿಳೆಯರು 4 ಸಾರಿಗೆ ನಿಗಮಗಳ ಸಾಮಾನ್ಯ, ನಗರ ಸಾರಿಗೆ ಮತ್ತು ವೇಗದೂತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ಅಂತೆಯೇ ಬಸ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಯರು ತಪ್ಪದೇ ಆಧಾರ್ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ ಹಾಜರು ಪಡಿಸಿ ನಿರ್ವಾಹಕರಿಂದ ಶೂನ್ಯ ಮೊತ್ತದ ಟಿಕೆಟ್ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಸಂಸ್ಥೆ ದಿವಾಳಿಯಾಗುತ್ತದೆ. ಈ ಸಂಸ್ಥೆ ಸರ್ಕಾರದ ಅಂಗಸಂಸ್ಥೆಯಾಗಿದೆ. ಮಹಿಳೆಯರ ಪ್ರಯಾಣಕ್ಕೆ ತಗಲುವ ವೆಚ್ಚದ ಮೊತ್ತವನ್ನು ಪ್ರತಿ ತಿಂಗಳು ಸರ್ಕಾರ ನಿಗಮಕ್ಕೆ ಪಾವತಿ ಮಾಡಲಿದೆ. ಮೂರು ತಿಂಗಳೊಳಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ವಿವರಿಸಿದರು.
ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಜಿಲ್ಲೆಯ ಮಹಿಳೆಯರು ರಾಜ್ಯದ ಯಾವ ಜಿಲ್ಲೆಗೂ ಬೇಕಾದರೂ ಸಂಚಾರ ಮಾಡಬಹುದು. ಬಡವರು ಮತ್ತು ಶ್ರೀಮಂತರು ಎನ್ನುವ ಬೇಧ ಭಾವವಿಲ್ಲದೇ ಉಚಿತವಾಗಿ ಪ್ರಯಾಣ ಮಾಡಬಹುದು. ಮಹಿಳೆ ತಾಯಿ, ಅಕ್ಕ, ತಂಗಿ, ಹೆಂಡತಿಯಾಗಿ ಕುಟುಂಬದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಮಹಿಳೆಯರನ್ನು ಗೌರವಿಸಲು ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
ಹಲವಾರು ಮಹಿಳೆಯರು ತಮ್ಮ ಮನೆಯ ಕೆಲಸದ ನಿರ್ವಹಣೆಯ ಜತೆಗೆ ಹೊರಗೂ ಸಹ ದುಡಿಯುತ್ತಾರೆ. ಗೆಜ್ಜಲಗೆರೆ ಗಾಮೆರ್ಂಟ್ಸ್‌ನಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ಅಟೋಗಳಲ್ಲಿ ಹಣ ಉಳಿತಾಯ ಮಾಡಲು ಕಡಿಮೆ ಆಸನದ ವ್ಯವಸ್ಥೆ ಇದ್ದರೂ ಹೆಚ್ಚಿನ ಜನರು ಸಂಚರಿಸುತ್ತಾರೆ. ಮಹಿಳೆಯರು ಈ ಯೋಜನೆಯನ್ನು ಉಪಯೋಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್, ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ಇತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಶಾಸಕ ರವಿಕುಮಾರ್ ಗಣಿಗ ಅವರಿಗೆ ಕಾಂಗ್ರೆಸ್ ವತಿಯಿಂದ ಅದ್ದೂರಿ ಸ್ವಾಗತ ನೀಡಲಾಯಿತು. ಪಟಾಕಿ ಸಿಡಿಸಿ, ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಲಾಯಿತು. ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ ಇದ್ದರು.