ಶಕ್ತಿ ಯೋಜನೆ: 6 ಕೋಟಿ ಉಚಿತ ಟಿಕೆಟ್ ವಿತರಣೆ

mysore
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯಡಿ ಕಳೆದ ಆರು ತಿಂಗಳಿನಲ್ಲಿ ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗದಲ್ಲಿ ಬರೋಬ್ಬರಿ ಆರು ಕೋಟಿ ಉಚಿತ ಟಿಕೆಟ್ ವಿತರಿಸಿದ್ದು, ಒಟ್ಟು ಪ್ರಯಾಣಿಕರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.75ರಷ್ಟಾಗಿದೆ. ಇದು ಕೆಎಸ್‌ಆರ್‌ಟಿಸಿಗೆ ಶೇ.57ರಷ್ಟು ಆದಾಯವನ್ನು ತಂದುಕೊಟ್ಟಿದೆ.


ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಶಕ್ತಿ ಯೋಜನೆ ಕಳೆದ ಜೂನ್ 11ರಂದು ರಾಜ್ಯಾದ್ಯಂತ ಜಾರಿಗೆ ಬಂತು. ಇದಕ್ಕೆ ಜಿಲ್ಲೆಯಲ್ಲೂ ನಾರಿ ಶಕ್ತಿಯಿಂದ ಸೂಕ್ತ ಸ್ಪಂದನೆ ಸಿಕ್ಕಿದೆ. ಕೆಂಪು ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಮುಂದುವರಿದಿದೆ. ಅಷ್ಟಾಗಿಯೂ ವನಿತೆಯರ ಉತ್ಸಾಹ ಇನ್ನೂ ಕಡಿಮೆಯಾಗಿಲ್ಲ.


ಶಕ್ತಿ ಯೋಜನೆ ಜಾರಿಯಾದ ಬಳಿಕ ನವೆಂಬರ್ ತಿಂಗಳ ಅಂತ್ಯದವರೆಗೆ ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗದಲ್ಲಿ 6.02 ಕೋಟಿ ಉಚಿತ ಟಿಕೆಟ್‌ಗಳನ್ನು ವಿತರಿಸಲಾಗಿದೆ. ಅಂತೆಯೆ, ಈ ಯೋಜನೆಯ ಲಾಭ ಪಡೆದ 6.02 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಇದರ ಫಲವಾಗಿ ರಾಜ್ಯ ಸರ್ಕಾರದ ವತಿಯಿಂದ 136.21 ಕೋಟಿ ರೂ. ಕೆಎಸ್‌ಆರ್‌ಟಿಸಿಗೆ ಪಾವತಿಸಬೇಕಿದೆ.


ಶಕ್ತಿ ಯೋಜನೆ ಆರಂಭಗೊಂಡ 6 ತಿಂಗಳಲ್ಲಿ 9.26 ಕೋಟಿ ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸಿದ್ದು, 235.33 ಕೋಟಿ ರೂ. ಆದಾಯ ಹರಿದು ಬಂದಿದೆ. ಶಕ್ತಿ ಯೋಜನೆಯ ಮುಖಾಂತರವೇ ಶೇ.57.9ರಷ್ಟು ಆದಾಯ ಗಳಿಕೆ ಆಗಿದೆ ಎಂದು ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ನಾರಿಮಣಿಗಳ ಸಂಚಾರ ದ್ವಿಗುಣ:


ಜೂನ್ 11ರಿಂದ 30ರವರೆಗೆ 89.40 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಇವರ ಪೈಕಿ 60.67 ಲಕ್ಷ ಮಹಿಳೆಯರಿದ್ದಾರೆ. ಜುಲೈ ತಿಂಗಳಲ್ಲಿ 1.71 ಕೋಟಿ ಪ್ರಯಾಣಿಕರಲ್ಲಿ 1.15 ಕೋಟಿ ಮಹಿಳಾ ಪ್ರಯಾಣಿಕರಿದ್ದಾರೆ. ಆಗಸ್ಟ್ ತಿಂಗಳಲ್ಲಿ 1.84 ಕೋಟಿ ಪ್ರಯಾಣಿಕರಲ್ಲಿ 1.07 ಕೋಟಿ ಮಹಿಳೆಯರಿದ್ದಾರೆ. ಕೆಂಪು ಬಸ್‌ಗಳಲ್ಲಿ ನಾರಿಮಣಿಗಳ ಸಂಚಾರ ದ್ವಿಗುಣಗೊಂಡಿರುವುದಕ್ಕೆ ಇದು ಸಾಕ್ಷಿಯಾಗಿದೆ.


ಸೆಪ್ಟೆಂಬರ್ ತಿಂಗಳಲ್ಲಿ 1.61 ಕೋಟಿ ಪ್ರಯಾಣಿಕರಲ್ಲಿ 1.04 ಕೋಟಿ ಮಹಿಳೆಯರು. ನಾಡಹಬ್ಬ ಮೈಸೂರು ದಸರಾ ಮಹೋತ್ಸವ ನಡೆದ ಅಕ್ಟೋಬರ್‌ನಲ್ಲಿ 1.59 ಕೋಟಿ ಪ್ರಯಾಣಿಕರು ನಿಗಮದ ಬಸ್‌ಗಳ ಸೇವೆ ಪಡೆದಿದ್ದು, ಇದರಲ್ಲಿ 1.06 ಕೋಟಿ ಮಹಿಳೆಯರಿದ್ದಾರೆ. ನವೆಂಬರ್ ತಿಂಗಳಲ್ಲಿ 1.60 ಕೋಟಿ ಪ್ರಯಾಣಿಕರಲ್ಲಿ 1.08 ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಪ್ರತಿ ತಿಂಗಳು ಆಸುಪಾಸು ಒಂದು ಕೋಟಿ ಮಹಿಳಾ ಪ್ರಯಾಣಿಕರು ಬಸ್ ಸೇವೆಯ ಲಾಭ ಪಡೆದುಕೊಂಡಿದ್ದಾರೆ.

ಸಂದಾಯವಾಗಬೇಕಿದೆ 136 ಕೋಟಿ ರೂ.


ರಾಜ್ಯ ಸರ್ಕಾರದಿಂದ ಆರು ತಿಂಗಳಿಗೆ ಮೈಸೂರು ವಿಭಾಗದ ಶಕ್ತಿ ಯೋಜನೆಗೆ 136.21 ಕೋಟಿ ರೂ. ಸಂದಾಯವಾಗಬೇಕಿದೆ. ಜೂನ್ ತಿಂಗಳಿಗೆ 13.48 ಕೋಟಿ ರೂ., ಜುಲೈ 25.60 ಕೋಟಿ ರೂ., ಆಗಸ್ಟ್ 23.76 ಕೋಟಿ ರೂ., ಸೆಪ್ಟೆಂಬರ್ 22.73 ಕೋಟಿ ರೂ., ಅಕ್ಟೋಬರ್ 25.49 ಕೋಟಿ ರೂ., ನವೆಂಬರ್ ತಿಂಗಳಲ್ಲಿ 25.12 ಕೋಟಿ ರೂ. ಆದಾಯ ಬಂದಿದೆ.

ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆ:


ಶಕ್ತಿ ಯೋಜನೆ ಜಾರಿಗೂ ಮುಂಚೆ ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಏಪ್ರಿಲ್ ತಿಂಗಳಲ್ಲಿ 1.11 ಕೋಟಿ ಪ್ರಯಾಣಿಕರು 920 ಬಸ್‌ಗಳಲ್ಲಿ ಸಂಚರಿಸಿದ್ದರು. 38.38 ಕೋಟಿ ರೂ. ಆದಾಯ ಬಂದಿತ್ತು. ಮೇ ತಿಂಗಳಲ್ಲಿ 1.17 ಕೋಟಿ ಪ್ರಯಾಣಿಕರು 917 ಬಸ್‌ಗಳಲ್ಲಿ ಸಂಚರಿಸಿ 44.09 ಕೋಟಿ ರೂ. ಆದಾಯ ಪಡೆದಿತ್ತು. ಆದರೀಗ ತಿಂಗಳಿಗೆ ಅಂದಾಜು 1.61 ಕೋಟಿಗೆ ಏರಿಕೆಯಾಗಿದೆ. ತಿಂಗಳಿಗೆ 50 ಲಕ್ಷ ಪ್ರಯಾಣಿಕರು ಹೆಚ್ಚಾಗಿದ್ದಾರೆ.
ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಈ ಹಿಂದೆ ದೈನಂದಿನ ಪ್ರಯಾಣಿಕರ ಸಂಖ್ಯೆ 3.23 ಲಕ್ಷ ಇತ್ತು. ಅದೀಗ 3.50 ಲಕ್ಷಕ್ಕೆ ಏರಿಕೆಯಾಗಿದೆ. ಶೇ.15 ಹೊಸ ಪ್ರಯಾಣಿಕರು ಸೇರ್ಪಡೆಗೊಂಡಿದ್ದಾರೆ. ಶಕ್ತಿ ಯೋಜನೆ ಪರಿಣಾಮದಿಂದಾಗಿ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.

ನಿತ್ಯ 1,071 ಬಸ್‌ಗಳು ಕಾರ್ಯಾಚರಣೆ:


ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಪ್ರಸ್ತುತ 976 ಅನುಸೂಚಿ ಮಾರ್ಗದಲ್ಲಿ ನಿತ್ಯ 7,911 ಟ್ರಿಪ್‌ನಲ್ಲಿ ಬಸ್‌ಗಳು ಓಡಾಡುತ್ತಿವೆ. 1,071 ಬಸ್‌ಗಳು ನಿತ್ಯ ಕಾರ್ಯಾಚರಣೆ ಮಾಡುತ್ತಿದ್ದು, ಪ್ರತಿದಿನ ಸರಾಸರಿ 3.14 ಲಕ್ಷ ಕಿ.ಮೀ. ಸಂಚಾರ ಮಾಡುತ್ತಿವೆ.

ಬಸ್‌ಗಳ ಕೊರತೆ:


ಪ್ರಯಾಣಿಕರ ಏರಿಕೆಗೆ ತಕ್ಕಂತೆ ಬಸ್‌ಗಳ ಸಂಖ್ಯೆಯನ್ನು ಹೆಚ್ಚು ಮಾಡಿಲ್ಲ. ಕೆಲ ಮಾರ್ಗಗಳಲ್ಲಿ ಬಸ್ ಸಂಚಾರ ರದ್ದುಪಡಿಸಲಾಗಿದೆ. ಸಂಚಾರ ಮಾರ್ಗವನ್ನೇ ಬದಲಿಸಲಾಗಿದೆ. ಟ್ರಿಪ್‌ಗಳ ಸಂಖ್ಯೆ ಇಳಿಕೆ ಮಾಡಲಾಗಿದೆ. ನಿಗದಿತ ಸಮಯಕ್ಕೆ ಬಸ್‌ಗಳೂ ಬರುತ್ತಿಲ್ಲ. 30 ನಿಮಿಷ, 1 ಗಂಟೆ ತಡವಾಗಿ ಬಸ್‌ಗಳು ಬರುತ್ತಿವೆ. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರಯಾಣಿಕ ಅನಿಲ್ ಮಹಾರಾಜಪೇಟೆ ತಿಳಿಸಿದರು.

ಸಾಮರ್ಥ್ಯ ಮೀರಿ ಪ್ರಯಾಣಿಕರು:


ಶಕ್ತಿ ಯೋಜನೆ ಬಳಿಕ ಬಸ್‌ನ ಆಸನ ಸಾಮರ್ಥ್ಯಕ್ಕೆ ಮೀರಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇದರಿಂದ ಬಸ್‌ಗಳ ಮೇಲೆ ಒತ್ತಡ ಹೆಚ್ಚಾಗಿದ್ದು, ನಿಧಾನಗತಿಯಲ್ಲಿ ದುಸ್ಥಿತಿಯತ್ತ ಮುಖ ಮಾಡುತ್ತಿವೆ. ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗದಲ್ಲಿ ಬಹಳಷ್ಟು ಹಳೇ ಬಸ್‌ಗಳಿವೆ. ಅವುಗಳು ಪ್ರಯಾಣಿಕರನ್ನು ಹೊತ್ತು ಸಾಗಿಸಲು ಎದೆಯುಸಿರು ಬಿಡುತ್ತಿವೆ.

ಸೀಟ್‌ಗಾಗಿ ಕಿತ್ತಾಟ:


ಪ್ರಯಾಣಿಕರ ದಟ್ಟಣೆಯಿಂದ ಆರಾಮದಾಯಕ, ಸುಲಲಿತ ಪ್ರಯಾಣಕ್ಕೆ ಅಡ್ಡಿ ಉಂಟಾಗುತ್ತಿದೆ. 52 ಆಸನಗಳ ಬಸ್‌ನಲ್ಲಿ 90ರಿಂದ 100 ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಕುಳಿತುಕೊಳ್ಳಲು ಆಸನಗಳು ಸಿಗುತ್ತಿಲ್ಲ. ಹೀಗಾಗಿ, ನಿಂತುಕೊಂಡೇ ಪ್ರಯಾಣ ಮಾಡಬೇಕಿದೆ. ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಪ್ರಯಾಣ ಇನ್ನಷ್ಟು ದುರಸ್ತವಾಗಿದೆ. ಕೆಲ ನಿಲುಗಡೆ ಸ್ಥಳದಲ್ಲಿ ಬಸ್ ನಿಲ್ಲಿಸದೆ ಹಾಗೇ ಸಾಗುತ್ತವೆ.

ಕೆಲ ಸಂದರ್ಭದಲ್ಲಿ ಬಸ್‌ನಲ್ಲಿ ಕಾಲಿಡಲು ಸಹ ಜಾಗ ಇರಲ್ಲ. ನಿಂತುಕೊಂಡು ಹೋಗಲೂ ಆಗದಂತಹ ಸ್ಥಿತಿ ಇರುತ್ತದೆ. ಕಚೇರಿ, ಶಾಲಾ-ಕಾಲೇಜಿಗೆ ನಿತ್ಯ ಸಂಚಾರ ಮಾಡುವವರು ಇದರಿಂದಾಗಿ ಹೈರಾಣ ಆಗಿದ್ದಾರೆ. ಈ ನಡುವೆ, ಸೀಟ್ ಹಿಡಿಯಲು ಹರಸಾಹಸ ಪಡುವಂತಾಗಿದೆ. ಇದಕ್ಕಾಗಿ ನಿತ್ಯ ಗಲಾಟೆಗಳು ಸಾಮಾನ್ಯ ಎನಿಸಿವೆ ಎಂದು ಹುಣಸೂರು-ಮೈಸೂರು ಮಾರ್ಗದಲ್ಲಿ ಸಂಚಾರ ಮಾಡುವ ಯಶವಂತ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net