ಶಕ್ತಿ ಯೋಜನೆ 1.02 ಕೋಟಿ ಪ್ರಯಾಣಿಕರು ಸಂಚಾರ, ಜಿಲ್ಲೆಯಲ್ಲಿ 34.06 ಕೋಟಿ ರೂ. ಮೌಲ್ಯದ ಶೂನ್ಯ ಟಿಕೆಟ್ ವಿತರಣೆ

shakthi
Published on

ಮಂಗಳೂರು: ರಾಜ್ಯ ಸರ್ಕಾರ ಸೋಮವಾರ ಶತ ದಿನ ಪೂರೈಸಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಜನಸಾಮಾನ್ಯರಲ್ಲಿ ಸಂತಸ ಮೂಡುವಂತೆ ಮಾಡಿದೆ.

ಸರ್ಕಾರದ ಗ್ಯಾರಂಟಿ ಯೋಜನೆಗಳು ದ.ಕ.ಜಿಲ್ಲೆಯಲ್ಲೂ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದು, ಜಿಲ್ಲಾಡಳಿತದ ಮೂಲಕ ಜಿಲ್ಲೆಯ ಎಲ್ಲ ಫಲಾನುಭವಿಗಳಿಗೆ ಯೋಜನೆಗಳ ಪ್ರಯೋಜನ ತಲುಪಿಸಲು ಅವಿರತ ಶ್ರಮ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜೂನ್ 11ರಂದು ಜಾರಿಯಾಗಿ, ಅಂದಿನಿಂದ ಒಟ್ಟು 34,06,52,000 ರೂ. ಮೌಲ್ಯದ ಶೂನ್ಯ ಟಿಕೆಟ್‌ಗಳನ್ನು ವಿತರಿಸಲಾಗಿದೆ.

ವಾರಾಂತ್ಯದಲ್ಲಿ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ಹೊರಜಿಲ್ಲೆಯಿಂದ ಹೆಚ್ಚಿನ ಮಹಿಳಾ ಪ್ರಯಾಣಿಕರು ಆಗಮಿಸುತ್ತಿದ್ದು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಚ್ಚಿನ ಆದಾಯ ಬರುತ್ತಿದೆ. ಪ್ರತಿ ತಿಂಗಳು 2000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಜಿಲ್ಲೆಯ 3,99,022 ಕುಟುಂಬಗಳ ಪೈಕಿ ಇದುವರೆಗೆ 3,05,358 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಯೋಜನೆಯ ಫಲಾನುಭವಿಗಳಿಗೆ ಖಾತೆಗೆ ಡಿಬಿಟಿ ಮೂಲಕ ಹಣ ಪಾವತಿಯಾಗಲಿದೆ.

--------------------

3.53 ಲಕ್ಷ ಗ್ರಾಹಕರಿಗೆ ಗೃಹಜ್ಯೋತಿ

200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ ಅರ್ಹ 5.59 ಲಕ್ಷ ವಿದ್ಯುತ್ ಬಳಕೆಗೆ ಗ್ರಾಹಕರಲ್ಲಿ ಇದುವರೆಗೆ 3.53 ಲಕ್ಷ ಗ್ರಾಹಕರಿಗೆ ಸಹಾಯಧನ ಬಿಲ್ ವಿತರಿಸುವ ಮೂಲಕ ಅಂದಾಜು 21.61 ಕೋಟಿ ರೂ. ವಿನಾಯಿತಿ ನೀಡಲಾಗಿದೆ. ಯೋಜನೆಯ ನೋಂದಣಿಗೆ ಅಂತಿಮ ದಿನಾಂಕ ನಿಗದಿಪಡಿಸಿಲ್ಲ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಅಂತ್ಯೋದಯ 15,520 ಹಾಗೂ 1,97,200 ಆದ್ಯತಾ ಪಡಿತರ ಚೀಟಿಯ ಸದಸ್ಯರಿಗೆ, ಪ್ರತಿ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 5 ಕೆಜಿಯಂತೆ ಅಕ್ಕಿ ವಿತರಿಸಲು ಆಹಾರ ಧಾನ್ಯ ಬದಲು ನೇರ ನಗದು ವರ್ಗಾವಣೆಯಡಿ 30.03 ಕೋಟಿ ರೂ. ಅನುದಾನ ರಾಜ್ಯ ಸರ್ಕಾರದಿಂದ ಪಾವತಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net