

ಮಂಗಳೂರು : ಶಕ್ತಿನಗರದ ಶಕ್ತಿ ವಸತಿ ಶಾಲೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ರವಿಶಂಕರ್ ಹೆಗಡೆ ಮಾತನಾಡಿ ಶಿಕ್ಷಕರ ದಿನಾಚರಣೆಯು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ವರ್ಷ ಪೂರ್ತಿ
ಆಚರಣೆಯಲ್ಲಿರಬೇಕು. ಅಕ್ಷರ ಕಲಿಸಿದಾತ ಗುರು ಅಂತಹ ಗುರುಗಳಿಗೆ ಯಾವತ್ತೂ ಋಣಿಯಾಗಿರಬೇಕು. ಜೀವನದಲ್ಲಿ ಗುರುವು ನಿರ್ಣಯಿಸುವ ಪ್ರತಿ ವಿಷಯವು ವಿದ್ಯಾರ್ಥಿಗಳಿಗೆ ಒಳ್ಳೆಯದಾಗಿರುತ್ತೆ. ಹಾಗಾಗಿ ಗುರುವು ಹೇಳಿದ ಪ್ರತಿ ವಿಷಯವನ್ನು ಅನುಮಾನಿಸದೆ, ಅವಮಾನಿಸದೆ, ಅಸಡ್ಡೆ ತೋರದೆ ಪಾಲಿಸಿದರೆ ಅದೇ ನಿಜವಾದ ಶಿಕ್ಷಕರ ದಿನಾಚರಣೆ ಎಂದರು.
ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ ಕೆ. ಮತ್ತು ದೀಪಕ್ ಕುಡುವ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಶಿಕ್ಷಕರ ಪಾದ ಪೂಜೆ ಮಾಡಿ ಸಂಪ್ರದಾಯದಂತೆ ಬರಮಾಡಿಕೊಂಡರು. ವಿವಿಧ ಮನರಂಜನೆಯ ಆಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿ ಅಭಯ್ ದಿನದ ಪ್ರಾಮುಖ್ಯತೆ ತಿಳಿಸಿದರು. ಅನನ್ಯ ಮತ್ತು ನಿಖಿತ್ ಕಾರ್ಯಕ್ರಮ ನಿರೂಪಿಸಿದರು. ನೈದಿಲೆ ಮತ್ತು ಸಾತ್ವಿರ್ ಆಟೋಟಗಳನ್ನು ಆಯೋಜಿಸಿದರು.