

ಸಿಂಧನೂರು: ನಗರದ ಸಾರಿಗೆ ಘಟಕದಲ್ಲಿರುವ 88 ಬಸ್‌ಗಳ ಪೈಕಿ 10 ಲಕ್ಷ ಕಿ.ಮೀ. ಸಂಚರಿಸಿರುವ ಬಸ್‌ಗಳನ್ನು ಬದಲಾಯಿಸಲಾಗುವುದು. ಡಿಪೋಕ್ಕೆ 40 ಹೊಸ ಬಸ್‌ಗಳನ್ನು ಶೀಘ್ರವೇ ತರಲಾಗುವುದು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಹೈಟೆಕ್ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಈಗಾಗಲೇ ಎರಡು ನೂತನ ಬಸ್‌ಗಳನ್ನು ಘಟಕಕ್ಕೆ ಒದಗಿಸಲಾಗಿದೆ. ಇನ್ನುಳಿದ ಬಸ್‌ಗಳು ಶೀಘ್ರವೇ ಬರಲಿವೆ. ಇದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿಂಧನೂರಿನ ಸಾರಿಗೆ ಘಟಕ ಅತ್ಯುತ್ತಮ ಕೆಲಸ ಮಾಡುತ್ತಿದ್ದು, ಉತ್ತಮ ಆದಾಯವನ್ನೂ ನೀಡಿದೆ. ಮಾಸಾಂತ್ಯದೊಳಗೆ ವೊಲ್ವೊ ಬಸ್ ಸಂಚಾರ ಆರಂಭಿಸಲಾಗುವುದು ಎಂದರು.
ಸರ್ಕಾರದ ಗ್ಯಾರಂಟಿಯಲ್ಲೊಂದಾದ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸಾರಿಗೆ ಇಲಾಖೆಗೆ ನಷ್ಟಗಾಲಿದೆ. ಆದರೆ, ಬಡವರ ಅನುಕೂಲಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಲಾಗಿದ್ದು, ಇತರ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ಸಿದ್ಧಗೊಳಿಸಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಅರುಣ್ ದೇಸಾಯಿ ಮಾತನಾಡಿ, ಮಹಿಳೆಯರು, ವಿದ್ಯಾರ್ಥಿನಿಯರು ಯೋಜನೆಗೆ ಅರ್ಹವಾಗಿದ್ದು, ನಿಗದಿತ ದಾಖಲಾತಿ ತೋರಿಸಿ ಪ್ರಯಾಣ ಮಾಡಬೇಕು ಎಂದು ತಿಳಿಸಿದರು. ಸಾರಿಗೆ ಘಟಕ ವ್ಯವಸ್ಥಾಪಕ ಪ್ರಕಾಶ ದೊಡ್ಡಮನಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾಪಂ ಇಒ ಲಕ್ಷ್ಮೀದೇವಿ ಗುರಿಕಾರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ಭಂಗಿ, ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ನಯೋಪ್ರಾ ಮಾಜಿ ಅಧ್ಯಕ್ಷ ಎಂ.ಕಾಳಿಂಗಪ್ಪ, ಪಿಐ ದುರುಗಪ್ಪ ಇದ್ದರು.