

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾಗಿ ಒಂದು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ 52.12 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಶೂನ್ಯ ಟಿಕೆಟ್ ಮೊತ್ತ 1352.68 ಕೋಟಿ ರೂ. ಗಳಾಗಿವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ತಿಳಿಸಿದ್ದಾರೆ.
ಶಕ್ತಿ ಯೋಜನೆಯು 2023ರ ಜೂನ್ 11ರಂದು ಜಾರಿಗೆ ಬಂದಿರುತ್ತದೆ. ರಾಜ್ಯದ ರಹವಾಸಿಯಾಗಿರುವ ಮಹಿಳೆಯರು (ಲಿಂಗತ್ವ ಅಲ್ಪಸಂಖ್ಯಾತರೂ ಸೇರಿ) ಹಾಗೂ ವಿದ್ಯಾರ್ಥಿನಿಯರು ಸಂಸ್ಥೆಯ ನಗರ, ಉಪನಗರ, ಸಾಮಾನ್ಯ, ವೇಗದೂತ ಸಾರಿಗೆಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಹಾಗೂ ಆಯ್ದ ಅಂತರ ರಾಜ್ಯ ವೇಗದೂತ ಸಾರಿಗೆಗಳಲ್ಲಿ ರಾಜ್ಯದ ಗಡಿಯವರೆಗೆ ಉಚಿತವಾಗಿ ಪ್ರಯಾಣಿಸುವ ಯೋಜನೆ ಇದಾಗಿದೆ. ನಿತ್ಯ ಸರಾಸರಿ 14.28 ಲಕ್ಷ ಮಹಿಳಾ ಪ್ರಯಾಣಿಕರು ಸಂಸ್ಥೆಯ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.