

ನೆಲಮಂಗಲ: ಮಾನವನನ್ನು ಮಹಾಮಾನವನನ್ನಾಗಿ ಪರಿವರ್ತಿಸುವ ಶಕ್ತಿ ವಚನಗಳಲ್ಲಿದೆ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರಸಭೆ ವ್ಯಾಪ್ತಿಯ ವಾಜರಹಳ್ಳಿಯ ಮಾರುತಿ ಬಡಾವಣೆಯ ಶ್ರೀ ವರಸಿದ್ಧಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಶನಿವಾರ ಆಯೋಜಿಸಿದ್ದ ವಚನದಿನ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾವಂತರಿಂದ ವಚನ ಸಾಹಿತ್ಯ ಹುಟ್ಟಿದ್ದಲ್ಲ. ಬದಲಾಗಿ 12ನೇ ಶತಮಾನದಲ್ಲಿ ಸ್ವಂತ ಕಾಯಕದ ಅನುಭವದಿಂದ ಬೆಳೆದು ಬಂದಿದೆ. ವಚನ ಸಾಹಿತ್ಯದಲ್ಲಿರುವ ತತ್ವಾದರ್ಶಗಳು ಆಧುನಿಕ ಜಗತ್ತಿನ ಉನ್ನತಿಗೆ ಸಹಕಾರಿಯಾಗಿವೆ. ನಗರ ಕೇಂದ್ರಗಳಲ್ಲಿ ಸೀಮಿತವಾಗಿದ್ದ ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಬಡಾವಣೆಗಳ ಮಟ್ಟಕ್ಕೆ ತಂದು ಜನರಿಗೆ ವಚನ ಸಾಹಿತ್ಯ ಸಂಪತ್ತಿನ ಅರಿವು ಮೂಡಿಸುತ್ತಿರುವ ಶರಣ ಸಾಹಿತ್ಯ ಪರಿಷತ್ ಕಾರ್ಯ ಪ್ರಶಂಸನೀಯ ಎಂದರು.
ದೇಶದ ಬಹುಸಂಖ್ಯಾತ ಜನರ ನಿರೀಕ್ಷೆಯಂತೆ ಶ್ರೀ ರಾಮಮಂದಿರ ನಿರ್ಮಾಣವಾಗುತ್ತಿದೆ. ಅದರಂತೆ ಬಸವಾದಿಶರಣರ ಆಶಯದಂತೆ ಪ್ರತಿಯೊಬ್ಬರೂ ಕಾಯಕ ತತ್ವ ಆಧಾರಿತ ಜೀವನ ರೂಪಿಸಿಕೊಳ್ಳಬೇಕು. ಬಸವರಾಜ್ಯ ಅಥವಾ ಕಲ್ಯಾಣ ರಾಜ್ಯ ಸ್ಥಾಪನೆ ಮಾಡಬೇಕು ಎಂದರು.
ಸಾಹಿತಿ ಎಚ್.ಸಿ.ಪರಮಶಿವಯ್ಯ ಮಾತನಾಡಿ, ಸರ್ವಕಾಲಕ್ಕೂ ಮನಷ್ಯ ಜೀವನಕ್ಕೆ ಬೇಕಾದ ಎಲ್ಲ ರೀತಿ ಮೌಲ್ಯಗಳು ವಚನದಲ್ಲಿದೆ. ಜಗಜ್ಯೋತಿ ಶ್ರೀ ಬಸವೇಶ್ವರರಂತೆ ಲಿಂಗೈಕ್ಯ ಸಿದ್ಧಗಂಗಾಶ್ರೀಗಳು ಹಾಗೂ ಆದಿಚುಂಚನಗಿರಿ ಶ್ರೀಗಳು ಲಕ್ಷಾಂತರ ಕುಟುಂಬಗಳ ಮನೆಯ ದಾರಿದೀಪವಾಗಿ ಬೆಳಗುತ್ತಿದ್ದಾರೆ. ಬಡಾವಣೆಯ ಸಾರ್ವಜನಿಕ ಉದ್ಯಾನವನದಲ್ಲಿ ಇಬ್ಬರು ಶ್ರೀಗಳ ಮೂರ್ತಿಯನ್ನು ಸ್ಥಾಪಿಸಬೇಕು. ಪ್ರತಿ ತಿಂಗಳಿಗೊಂದು ಬಸವಾದಿ ಶರಣದ ವಚನಗಳನ್ನು ಮುಂದಿನ ಪೀಳಿಗೆಯ ಮಕ್ಕಳಿಗೆ ಕೊಡುಗೆಯಾಗಿ ನೀಡಬೇಕು ಎಂದರು.
ಬಹುಮಾನ ವಿತರಣೆ: ಕಾರ್ಯಕ್ರಮದ ಪ್ರಯುಕ್ತ ಪರಿಷತ್ ನಿಂದ ಬಡಾವಣೆಯಲ್ಲಿನ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಚನ ಪ್ರಬಂಧ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ಪ್ರಮಾಣ ಪತ್ರ ನೀಡಲಾಯಿತು.
ವಾಜರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ವಿ.ಕೆ.ಕೆಂಪರಾಜು, ಪರಿಷತ್ ತಾಲೂಕು ಅಧ್ಯಕ್ಷ ಕೆ.ಬಿ.ಶಿವಶಂಕರಯ್ಯ, ನಿವೃತ ಮುಖ್ಯಶಿಕ್ಷಕ ಜಿ.ಕುಮಾರ್‌ಸ್ವಾಮಿ, ಬಿಲ್ವಪತ್ರೆ ಸಮಿತಿ ಅಧ್ಯಕ್ಷ ರಾಜಣ್ಣ, ಖಜಾಂಚಿ ಎಸ್.ಸಿ.ಪ್ರಕಾಶ್, ಕಾರ್ಯದರ್ಶಿ ಎಂ.ಎಸ್.ಲೋಕೇಶ್, ವರಸಿದ್ಧಿ ವಿನಾಯಕ ಸೇವಾಸಮಿತಿ ಗೌರವಾಧ್ಯಕ್ಷ ಗಂಗರಾಜು, ಖಜಾಂಚಿ ಜಗದೀಶ್, ಗಾಯಕಿ ಅರ್ಚನಾ ಕುಲಕರ್ಣಿ, ಉಪನ್ಯಾಸಕಿ ಅಕ್ಕಮಹಾದೇವಿ, ರೇಣುಕಮ್ಮ ಮತ್ತಿತರರು ಉಪಸ್ಥಿತರಿದರು.