ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಮಾಜಿ ಎಂಎಲ್‌ಸಿ ಅರುಣ ಶಹಾಪುರ ಅಭಿಮತ

mng-29aug-shakti
Published on




ಮಂಗಳೂರು : ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಮಾಜಿ ಎಂಎಲ್‌ಸಿ ಅರುಣ ಶಹಾಪುರ ಉದ್ಘಾಟಿಸಿದರು.
ಈ ಸಂದರ್ಭ ಅವರು ಮಾತನಾಡಿ ‘ ಕ್ರೀಡೆ ನಮ್ಮ ಶಾರೀರಿಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ. ಹಾಗಾಗಿ ಎಲ್ಲರೂ ಕ್ರೀಡೆಯನ್ನು ಇಷ್ಟಪಡುತ್ತಾರೆ. ಒಂದು ವಿದ್ಯಾಸಂಸ್ಥೆ ಪರಿಪೂರ್ಣವಾಗಬೇಕಾದರೆ ಆ ವಿದ್ಯಾ ಸಂಸ್ಥೆಯಿಂದ ಕ್ರೀಡಾ ಸಾಧನೆಯೂ ಆಗಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ಹರಿದಾಸ ಕೂಳೂರು ಮಾತನಾಡಿ ಮೇಜರ್ ಧ್ಯಾನಚಂದ ಬಾಲ್ಯದಿಂದ ಕ್ರೀಡೆಯಲ್ಲಿ ತೊಡಗಿದವರಲ್ಲದಿದ್ದರೂ ತಮ್ಮ ಕ್ರೀಡಾ ಸಾಧನೆಯ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು. ಕ್ರೀಡೆಗೆ ವಯೋನಿರ್ಬಂಧ ಇಲ್ಲ. ಯಾವ ಅಡೆತಡೆಗಳೂ ಕ್ರೀಡಾ ಸಾಧನೆಗೆ ತೊಂದರೆ ಆಗುವುದಿಲ್ಲ. ನಾವು ನಮ್ಮ ಮನಸ್ಸಿನಲ್ಲಿ ದೃಢವಾದ ನಿರ್ಧಾರ, ನಿರಂತರವಾದ ಪರಿಶ್ರಮ ಹಾಗೂ ಏಕಾಗ್ರತೆಯಿಂದ ಎಂತಹ ಸಾಧನೆಯನ್ನೂ ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಶಕ್ತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾಕ್ ವಹಿಸಿದ್ದರು. ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಹೆಚ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲ ರವಿಶಂಕರ ಹೆಗಡೆ ಉಪಸ್ಥಿತರಿದ್ದರು. ಶಿಕ್ಷಕಿ ಅಕ್ಷಿತಾ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಶಿಕ್ಷಕ ಶರಣಪ್ಪ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net