

ಮಂಗಳೂರು: ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬುಧವಾರ ಹಾಗೂ ಗುರುವಾರ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಸಂಪನ್ನಗೊಂಡಿತು.
ಬುಧವಾರ ಬೆಳಗ್ಗೆ ಭಜನಾ ನಾಮಸಂಕೀರ್ತನೆ, ದೇವರಿಗೆ ಪಂಚಾಮೃತಾಭಿಷೇಕ, ಮಹಾಗಣಪತಿ ಹವನ ಮಹಾಪೂಜೆ ಜರುಗಿತು.
ಸಂಜೆ 4.30ರಿಂದ ನಾಟ್ಯ ವಿದುಷಿ ವಿನುತಾ ಲಕ್ಷ್ಮೀಕಾಂತ್ ಜೋಗಿ ಇವರ ಸಂಗೀತ ನೃತ್ಯರಾಧನಾ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಸಂಜೆ 6ರಿಂದ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ಜರುಗಿತು ರಾತ್ರಿ 11:30ಕ್ಕೆ ವಿಶೇಷ ಅಲಂಕಾರ ಪೂಜೆಯ ನಂತರ ಶ್ರೀ ಗೋಪಾಲಕೃಷ್ಣ ದೇವರಿಗೆ ಅರ್ಘ್ಯಪ್ರದಾನ ನೆರವೇರಿತು. ನಗರದ ಅನೇಕ ಭಕ್ತಾದಿಗಳು ಈ ಅರ್ಘ್ಯ ಪ್ರದಾನ ಸೇವೆಯಲ್ಲಿ ಪಾಲ್ಗೊಂಡರು.
ಗುರುವಾರ ಪ್ರಾತಃಕಾಲ ಪಂಚಾಮೃತಾಭಿಷೇಕ ಗಣಪತಿ ಹವನ ನಡೆದು ಲಕ್ಷ ತುಳಸೀ ಅರ್ಚನೆ ಸಂಪನ್ನಗೊಂಡಿತು. ಮಧ್ಯಾಹ್ನ 12:30 ಕ್ಕೆ ಶ್ರೀ ದೇವರ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಜರುಗಿತು. ಊರ ಪರವೂರ ಅಪಾರಭಕ್ತರು ಪಾಲ್ಗೊಂಡಿದ್ದರು. ವಿವಿಧ ಗಣ್ಯರು ದೇವಸ್ಥಾನಕ್ಕೆ ಆಗಮಿಸಿ ಪ್ರಸಾದವನ್ನು ಸ್ವೀಕರಿಸಿದರು. ದೇವಳದ ಆಡಳಿತ ಮುಖ್ಯಸ್ಥರಾದ ಡಾ.ಕೆ.ಸಿ ನಾಕ್, ಮೊಕ್ತೇಸರರಾದ ಸಗುಣಾ ನಾಕ್, ಸಂಜಿತ್ ನಾಕ್ ಉಪಸ್ಥಿತರಿದ್ದರು.