

ಮಂಗಳೂರು: ಶಿಕ್ಷಣ ಕೊಡುವ ಶಿಕ್ಷಣ ಸಂಸ್ಥೆಗಳು ಅನೇಕ ಇರಬಹುದು. ಆದರೆ ಪಠ್ಯದ ಜೊತೆಗೆ ವ್ಯಕ್ತಿತ್ವ ನಿರ್ಮಾಣದ ಶಿಸ್ತು ಮತ್ತು ಸಂಸ್ಕಾರ ಕೊಡುವುದು ಬಹಳಷ್ಟು ಮುಖ್ಯ ಎಂದು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಹೇಳಿದರು.
ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ನಡೆದ 10 ದಿನಗಳ ಶಕ್ತಿ ಕ್ಯಾನ್ ಕ್ರೀಯೆಟ್ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಮ ಭಾರತಕ್ಕೆ ಶ್ರೇಷ್ಠ ವ್ಯಕ್ತಿತ್ವ ಯಾಕೆಂದರೆ ಅವನಲ್ಲಿರುವ ಉದಾತ್ತ ಗುಣಗಳೇ ಕಾರಣ. ಇವತ್ತು ರಾಮನನ್ನು ಕೇವಲ ಧರ್ಮಕ್ಕೆ ಸೀಮಿತ ಮಾಡುವುದು ಸರಿಯಲ್ಲ. ಅವನಲ್ಲಿರುವ ಗುಣಗಳು ಎಲ್ಲರೂ ಅಳವಡಿಸಿದಾಗ ನಾವೆಲ್ಲರೂ ಶ್ರೇಷ್ಠತೆಯನ್ನು ಪಡೆಯಲು ಸಾಧ್ಯ ಎಂದರು.
ಇಂದಿನ ಕಾಲಮಾನಕ್ಕೆ ಪಠ್ಯದ ಜೊತೆ ಸಂಸ್ಕಾರ ಕೊಡುವುದು ಮುಖ್ಯವಾಗಿದೆ. ಯಾಕೆಂದರೆ ಮುಂದಿನ ದಿನಗಳಲ್ಲಿ ನಾವು ಹೆಚ್ಚು ಹೆಚ್ಚು ಶಿಕ್ಷಣ ಪಡೆದ ನಂತರ ತಂದೆ ಮತ್ತು ತಾಯಿಯನ್ನು ಮರೆತು ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಸಾಧ್ಯತೆಯಿದೆ. ಆದ್ದರಿಂದ ನಾವೆಲ್ಲರೂ ಶಿಕ್ಷಣದ ಜೊತೆ ಭಾರತದ ಗುರುಕುಲ ಮಾದರಿಯ ಶಿಸ್ತು ಮತ್ತು ಸಂಸ್ಕಾರವನ್ನು ಪಡೆಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ ಶಕ್ತಿ ಶಿಕ್ಷಣ ಸಂಸ್ಥೆ ಕಳೆದ 7 ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಂಸ್ಕಾರವನ್ನು ಕೊಡುವ ಕೆಲಸವನ್ನು ನಿರಂತರವಾಗಿ ಕೊಡುತ್ತಾ ಬಂದಿದೆ. ಪ್ರತಿ ದಿನ ಪ್ರಾರ್ಥನೆಯ ಮೂಲಕ ಶಿಸ್ತನ್ನು ಕಲಿಸಿ ಕೊಡುತ್ತಿದೆ. ಈ 10 ದಿನದ ಶಿಬಿರದ ಯಶಸ್ಸಿಗೆ ಶ್ರಮಿಸಿದ ಸಂಸ್ಥೆಯ ಶಿಕ್ಷಕ- ಶಿಕ್ಷಕೇತರನ್ನು ಅಭಿನಂದಿಸಿದರು. ಇಲ್ಲಿ ಕಲಿಸಿಕೊಟ್ಟಿರುವ ಪ್ರತಿಯೊಂದು ವಿದ್ಯೆಯನ್ನು ದಿನ ನಿತ್ಯ ನಿಮ್ಮ ಜೀವನದಲ್ಲಿ ಅಳವಡಿಸುವಂತೆ ಕರೆ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಡಾ.ಕೆ.ಸಿ.ನಾಕ್ ಅವರು ಪಟ್ಲ ಸತೀಶ ಶೆಟ್ಟಿಯವರನ್ನು ಸನ್ಮಾನಿಸಿದರು. ನಂತರ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು. ವಿದ್ಯಾರ್ಥಿಗಳು ಮತ್ತು ಪೋಷಕರು ಶಿಬಿರದ ಬಗ್ಗೆ ಅಭಿಪ್ರಾಯ ತಿಳಿಸಿದರು.
ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು. ರೇಖಾ ಸ್ವಾಗತಿಸಿದರು. ಭಾಸ್ಕರ ಎನ್. ವಂದಿಸಿದರು. ನಯನ ಕುಮಾರಿ ನಿರೂಪಿಸಿದರು.