

ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಮೂಲಕ ಉಡುಪಿ ಜಿಲ್ಲೆಯ ಸರ್ಕಾರಿ ಬಸ್ ಗಳಲ್ಲಿ 9.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಸಾರಿಗೆ ಸಂಸ್ಥೆಗೆ ಜುಲೈ 14ರ ವರೆಗೆ 3.62 ಕೋಟಿ ರೂ. ಆದಾಯ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಡುಪಿ ಮತ್ತು ಕುಂದಾಪುರ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ನಗರ ಸಾರಿಗೆ, ವೇಗದೂತ ಮತ್ತು ಸಾಮಾನ್ಯ ಸಾರಿಗೆಗಳಲ್ಲಿಯೂ ಮಹಿಳಾ ಪ್ರಯಾಣಿಕರ ಸಂಚಾರದಲ್ಲಿ ಗಣನೀಯ ಏರಿಕೆಯಾಗಿದ್ದು, ಶಕ್ತಿ ಯೋಜನೆ ಜಾರಿಯಾದ ಬಳಿಕ ಸುಮಾರು ಶೇ. 25 ರಿಂದ 30 ರಷ್ಟು ಪ್ರಯಾಣಿಕರ ಸಂಖ್ಯೆ ಅಧಿಕಗೊಂಡಿದೆ.
ಜೂನ್ 11 ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, ಜೂನ್30 ರ ವರೆಗೆ ಉಡುಪಿ ಘಟಕದಲ್ಲಿ , ನಗರ ಸಾರಿಗೆ ಬಸ್ ಗಳಲ್ಲಿ 1,00,838 ಮಹಿಳಾ ಪ್ರಯಾಣಿಕರು ಸಂಚರಿಸಿ 14,70,793 ರೂ, ವೇಗದೂತ ಬಸ್ ಗಳಲ್ಲಿ 94,998 ಮಹಿಳಾ ಪ್ರಯಾಣಿಕರು ಸಂಚರಿಸಿ 74,09,003 ರೂ, ಸಾಮಾನ್ಯ ಬಸ್ ಗಳಲ್ಲಿ 40,232 ಮಹಿಳಾ ಪ್ರಯಾಣಿಕರು ಸಂಚರಿಸಿ 7,94,933 ರೂ, ಆದಾಯ ಬಂದಿದ್ದರೆ, ಕುಂದಪುರ ಘಟಕದಲ್ಲಿ ವೇಗದೂತ ಬಸ್ ಗಳಲ್ಲಿ 71,410 ಮಹಿಳಾ ಪ್ರಯಾಣಿಕರು ಸಂಚರಿಸಿ 63,25,419 ರೂ, ಸಾಮಾನ್ಯ ಬಸ್ ಗಳಲ್ಲಿ 2,41,497 ಮಹಿಳಾ ಪ್ರಯಾಣಿಕರು ಸಂಚರಿಸಿ 43,52,614 ರೂ, ಆದಾಯ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 5,48,975 ಮಹಿಳಾ ಪ್ರಯಾಣಿಕರು ಸಂಚರಿಸಿ 2,03,52,762 ರೂ ಆದಾಯ ಸಾರಿಗೆ ನಿಗಮಕ್ಕೆ ಬಂದಿದೆ.
ಜುಲೈ 14 ರ ವರೆಗೆ ಉಡುಪಿ ಘಟಕದಲ್ಲಿ ಒಟ್ಟು 1,92,641 ಮಹಿಳೆಯರು ಸಂಚರಿಸಿದ್ದು, 78,40,072 ರೂ ಆದಾಯ, ಕುಂದಾಪುರ ಘಟಕದಲ್ಲಿ 2,29,557 ಮಹಿಳೆಯರು ಸಂಚರಿಸಿದ್ದು, 80,88,362 ರೂ ಆದಾಯ ಗಳಿಕೆಯಾಗುವ ಮೂಲಕ ಯೋಜನೆ ಜಾರಿಗೆಯಾದಾಗಿನಿಂದ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 9.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಸಾರಿಗೆ ಸಂಸ್ಥೆಗೆ 3.62 ಕೋಟಿ ರೂ ಆದಾಯ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಾಬಲ್ಯವಿದ್ದರೂ ಸಹ ಶಕ್ತಿ ಯೋಜನೆಯ ನಂತರ ಮಹಿಳಾ ಪ್ರಯಾಣಿಕರು ಸರಕಾರಿ ಬಸ್ ಗಳಲ್ಲಿ ಸಂಚರಿಸಲು ಉತ್ಸಾಹ ತೋರುತ್ತಿದ್ದು, ಸರಕಾರದ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ. ಉಡುಪಿಯ ಘಟಕದಲ್ಲಿ 65 ಬಸ್ ಮತ್ತು ಕುಂದಾಪುರ ಘಟಕದ ಬಸ್ ಗಳು 68 ಬಸ್ ಗಳು ಶಕ್ತಿ ಯೋಜನೆಯಡಿ ಪ್ರತಿದಿನ ಸೇವೆ ನೀಡುತ್ತಿದ್ದು, ಪ್ರತಿದಿನ ಜಿಲ್ಲೆಯ ವಿವಿಧ ಕಡೆಗಳಿಲ್ಲಿ ಮತ್ತು ಜಿಲ್ಲೆಯ ಹೊರಗೆ ಹಲವಾರು ಟ್ರಿಪ್ ಸಂಚರಿಸುತ್ತಿವೆ. ವಾರಾಂತ್ಯದಲ್ಲಿ ಉಡುಪಿಯ ಶ್ರೀ ಕೃಷ್ಠ ಮಠ, ಮಲ್ಪೆ ಬೀಚ್ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಹೊರ ಜಿಲ್ಲೆಯಿಂದ ಹೆಚ್ಚಿನ ಮಹಿಳಾ ಪ್ರಯಾಣಿಕರು ಆಗಮಿಸುತ್ತಿದ್ದಾರೆ.