

ಸಿಂದಗಿ: ಸನಾತನ ಹಿಂದು ಧರ್ಮದ ‘ದೇವಭಾಷೆ’ ಎಂದೇ ಖ್ಯಾತಿ ಹೊಂದಿರುವ ಸಂಸ್ಕೃತವನ್ನು ಸಾಮಾನ್ಯವಾಗಿ ಅನ್ಯ ಧರ್ಮೀಯರು ಅಧ್ಯಯನ ಮಾಡುವುದು ಕಡಿಮೆ. ಅದರಲ್ಲೂ ಶಿಕ್ಷಕರಾಗಿ ಸೇವೆ ಸಲ್ಲಿಸುವವರೂ ವಿರಳ. ಇದಕ್ಕೆ ವ್ಯತಿರಿಕ್ತ ಎಂಬಂತೆ ಮುಸ್ಲಿಂ ಧರ್ಮದ ಶಿಕ್ಷಕರೊಬ್ಬರು ಸಂಸ್ಕೃತವನ್ನೇ ತಮ್ಮ ಜೀವನ ಭಾಷೆಯಾಗಿಸಿಕೊಂಡು, ಸಾಕಷ್ಟು ವಿದ್ಯಾರ್ಥಿಗಳಿಗೆ ಅದನ್ನು ಬೋಧನೆ ಮಾಡುತ್ತಿದ್ದಾರೆ.
ಅವರೇ ಶಿಕ್ಷಕ ಶಕೀಲ್ ಅಹ್ಮದ್ ಮೌಲಾಸಾಬ ಅಂಗಡಿ. ಮೂಲತಃ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದವರು. ಬಂಥನಾಳ ಮಠದ ಒಡನಾಟದಲ್ಲಿ ಬೆಳೆದ ಶ್ರೀಯುತರು, ಪೂಜ್ಯ ವೃಷಭಲಿಂಗೇಶ್ವರ ಶ್ರೀಗಳ ಪ್ರೇರಣೆಯಿಂದ ಸಂಸ್ಕೃತಕ್ಕೆ ತಮ್ಮ ಅರ್ಪಿಸಿಕೊಂಡಿದ್ದಾರೆ. ಜಮಖಂಡಿಯ ಲಕ್ಷ್ಮೀನರಸಿಂಹ ಸಂಸ್ಕೃತ ಪಾಠಶಾಲೆ ಸೇರಿ ಅಲ್ಲಿ ಪ್ರಹ್ಲಾದ ಭಟ್ಟರ ಶಿಷ್ಯರಾಗಿ ಸಂಸ್ಕೃತ ಅಭ್ಯಸಿಸಿ, ಪ್ರಾವಿಣ್ಯತೆ ಪಡೆದು ಸದ್ಯ ನೂರಾರು ಮಕ್ಕಳಿಗೆ ಸಂಸ್ಕೃತ ಕಲಿಸುತ್ತಿದ್ದಾರೆ.
ಕಳೆದ 26 ವರ್ಷದಿಂದ ಬೋಳೆಗಾಂವದ ವೃಷಭಲಿಂಗಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತ ಕಲಿಸುತ್ತಿದ್ದು, ಇವರಿಂದ ಸಂಸ್ಕೃತ ಕಲಿತ ಹಲವಾರು ವಿದ್ಯಾರ್ಥಿಗಳು ರಾಜ್ಯದ ವಿವಿಧೆಡೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕ ಶಕೀಲ ಅಹ್ಮದ್ ಸಂಸ್ಕೃತ ಶ್ಲೋಕಗಳು, ವಾಕ್ಯ ರಚನೆಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಸಂಸ್ಕೃತ ಜ್ಞಾನವನ್ನು ಬೆಳೆಸುವಲ್ಲಿ ನಿರತರಾಗಿದ್ದಾರೆ.
ಮನೆಯಲ್ಲಿ ನಮ್ಮ ಧರ್ಮ. ಹೊರಗೆ ಸಂಸ್ಕೃತವೇ ಪ್ರಧಾನ ಎಂದು ಹೆಮ್ಮೆಯಿಂದ ಹೇಳುವ ಶಕೀಲ್ ಸರ್, ರಾಜ್ಯದ ವಿವಿಧೆಡೆ ಆಯೋಜಿಸುವ ಸಂಸ್ಕೃತ ಕಲಿಕೆ ಶಿಬಿರಗಳಲ್ಲಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಸಂಸ್ಕೃತ ಕಲಿಸುವ ಕೆಲಸ ಮಾಡುತ್ತಿರುವುದು ವಿಶೇಷ.
ಯಾವುದೇ ಧರ್ಮಕ್ಕೆ ಮಡಿವಂತಿಕೆ ಎಂಬುದಿಲ್ಲ. ಮುಸ್ಲಿಮರಾಗಿದ್ದರೂ ಸಂಸ್ಕೃತವನ್ನು ಕಲಿತು, ಬೋಧಿಸುತ್ತಿರುವುದು ಸಂತಸದ ವಿಚಾರ. ದೇವ ಭಾಷೆ ಕಲಿತು ಶಿಕ್ಷಕರಾಗಿ ಭವಿಷ್ಯದ ಪೀಳಿಗೆಯನ್ನು ಸಂಸ್ಕೃತದತ್ತ ಆಕರ್ಷಿಸುವ ಶಕೀಲ್ ಅಹ್ಮದ್ ಅವರಂತವರು ಎಲ್ಲರಿಗೂ ಮಾದರಿ.ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಸಾರಂಗಮಠ-ಗಚ್ಚಿನಮಠ ಸಿಂದಗಿ
ಮಠಗಳ ಸಂಸ್ಕಾರ, ಬಂಥನಾಳ ಶ್ರೀಗಳಿಂದ ಪಡೆದ ಸಂಸ್ಕೃತ ಭಾಷೆಯ ಪ್ರೇರಣೆ ನನ್ನನ್ನು ಸಂಸ್ಕೃತದತ್ತ ಎಳೆದು ತಂದಿತು. ಜಮಖಂಡಿಯ ಪ್ರಲ್ಹಾದ ಭಟ್ಟರು ನನಗೆ ಸಂಸ್ಕೃತ ಕಲಿಸಿದರು. ನನ್ನ ಆಯ್ಕೆಯ ಕಲಿಕೆಗೆ ನನ್ನ ಮನೆಯವರು ಹಾಗೂ ಊರಿನ ಜನರು ಬೆನ್ನು ತಟ್ಟಿದರು. ನನ್ನ ಸೇವಾವಧಿಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಬೋಧಿಸುತ್ತಿರುವೆ.ಶಕೀಲ್‌ಅಹ್ಮದ್ ಅಂಗಡಿ, ಸಂಸ್ಕೃತ ಶಿಕ್ಷಕ