

ಇಂಡಿ: ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ ಎಂದು ಪುರಸಭೆ ಅಧ್ಯಕ್ಷೆ ಶೈಲಜಾ ಪೂಜಾರಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಬೆಂಬಲ ಮತ್ತು ಆಶೀರ್ವಾದದಿಂದ ನಾನು ಪುರಸಭೆಗೆ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದೇನೆ ಎಂದರು.
ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲರು ನಮ್ಮ ಮನೆಗೆ ಬಂದು ನನ್ನ ಪತಿ ಶ್ರೀಶೈಲ ಪೂಜಾರಿ ಅವರನ್ನು ಕರೆದುಕೊಂಡು ಹೋಗಿ ಸತ್ಕಾರ ಮಾಡಿ ಒತ್ತಾಯಪೂರ್ವಕವಾಗಿ ಪಕ್ಷದ ಶಾಲು ಹೊದಿಸಿ ನಾನು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿಲ್ಲ. ಕಾಂಗ್ರೆಸ್ ಬೆಂಬಲದಿಂದ ಅಧ್ಯಕ್ಷರಾಗಿರುವುದಾಗಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ನಾನು ನನ್ನ ಸ್ವಇಚ್ಛೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದೇನೆ. ಇನ್ನು ಮುಂದೆ ಶಾಸಕರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿಯುತ್ತೇನೆ ಎಂದವರು ತಿಳಿಸಿದರು. ಅವಿನಾಶ ಬಗಲಿ, ಶ್ರೀಶೈಲ ಪೂಜಾರಿ ಮತ್ತಿತರರು ಇದ್ದರು.