

ಶಹಾಪುರ: ಕಾಲುವೆ ಕೆಳಭಾಗದ ಹೊಲಗಳಿಗೆ ಅನುವಾಗುವಂತೆ ನೀರು ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅಧಿಕಾರಿಗಳಿಗೆ ಸೂಚಿಸಿದರು.
ಭೀಮರಾಯನ ಗುಡಿ ಪ್ರವಾಸಿ ಮಂದಿರದಲ್ಲಿ ಬುಧವಾರ ಕೃಷ್ಣಾ ಕಾಡಾ ವ್ಯಾಪ್ತಿಯ ಕಾಲುವೆ ಕೆಳಭಾಗದ ರೈತರ ಜಮೀನುಗಳಿಗೆ ಸಮರ್ಪಕ ನೀರು ಬರದೆ ಬೆಳೆಗಳು ಒಣಗುತ್ತಿವೆ ಎಂದು ಸಚಿವರು ಮತ್ತು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಎದುರು ರೈತರು ಗೋಳು ತೋಡಿಕೊಂಡರು. ತಕ್ಷಣ ಸಂಬಂಧಿಸಿದ ಮೇಲಧಿಕಾರಿಗಳ ಜತೆ ಮಾತನಾಡಿದ ದರ್ಶನಾಪುರ, ಎರಡು ದಿನದಲ್ಲಿ ಕಾಲುವೆಗೆ ನೀರು ಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಳೆಯೂ ಇಲ್ಲ, ಕಾಲುವೆಗೂ ನೀರು ಬರುತ್ತಿಲ್ಲ. ಬೆಳೆಗಳು ಒಣಗಿ ಹೋಗಿದ್ದು, ಇನ್ನೂ ನಾಲ್ಕು ದಿನಗಳಲ್ಲಿ ಮಳೆ ಅಥವಾ ಕಾಲುವೆಗೆ ನೀರು ಬರದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ರೈತರು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ನಂತರ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಅವರು ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ತೇನಸಿಂಗ್ ಹಾಗೂ ಆಲಮಟ್ಟಿ ಮೇಲಧಿಕಾರಿ ಸೇರಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಸಚಿವ ಆರ್.ಬಿ. ತಿಮ್ಮಾಪುರ ಜತೆ ಮಾತನಾಡಿದ ಬಳಿಕ ಎರಡು ದಿನದಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗುವುದು ಎಂದು ತಿಳಿಸಿದರು.