ಶಹಾಪುರ ಬಳಿಯ ಟೋಲ್ ಗೇಟ್‌ನಲ್ಲಿ ಎಇಇ ಮೇಲೆ ಮಾರಣಾಂತಿಕ ಹಲ್ಲೆ

Koppal Near Shahapur Toolgate Attack on AEE
ಕೊಪ್ಪಳ ತಾಲೂಕಿನ ಶಹಾಪುರ ಟೋಲ್‌ನಲ್ಲಿ ಅಧಿಕಾರಿಗಳ ಮೇಲೆ ದಾಳಿ ನಡೆಸಿರುವುದು.
Published on

ಕೊಪ್ಪಳ: ತಾಲೂಕಿನ ಶಹಾಪುರ ಬಳಿಯ ಟೋಲ್ ಗೇಟ್‌ನಲ್ಲಿ ಶುಲ್ಕ ಕಟ್ಟುವ ಸಂಬಂಧ ಟೋಲ್ ಸಿಬ್ಬಂದಿ ಹಾಗೂ ಶಹಾಪುರ ಮತ್ತು ಹಿಟ್ನಾಳ್ ಗ್ರಾಮದ ಕೆಲವರು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಗಂಗಾವತಿ ವಿಭಾಗದ ಎಇಇ ಚಿದಾನಂದ ಹಾಗೂ ಇನ್ನಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಮುನಿರಾಬಾದ್‌ನಿಂದ ಗಂಗಾವತಿಗೆ ಗುರುವಾರ ಸಂಜೆ ತೆರಳುವಾಗ ಟೋಲ್ ದಾಟುವಾಗ ಗಲಾಟೆ ನಡೆದಿದೆ. ಸರ್ಕಾರಿ ಅಧಿಕಾರಿಯಾದ ಕಾರಣ ವಿನಾಯತಿ ನೀಡುವಂತೆ ಟೋಲ್ ಸಿಬ್ಬಂದಿಗೆ ಚಿದಾನಂದ ತಿಳಿಸಿದ್ದಾರೆ. ಗುರುತಿನ ಚೀಟಿ ಸಹ ನೀಡಿದ್ದಾರೆ. ಆದರೂ ಇಬ್ಬರ ನಡುವೆ ಮಾತು ಬೆಳೆದಿದೆ. ಬಳಿಕ ಶಹಾಪುರ ಹಾಗೂ ಹಿಟ್ನಾಳ್ ಗ್ರಾಮದ ಕೆಲವರಿಗೆ ಕರೆ ಮಾಡಿ ಕರೆಸಿಕೊಂಡು ಕಾರ್‌ನಲ್ಲಿದ್ದ ಎಇಇ, ಚಾಲಕ ಮತ್ತು ಗುತ್ತಿಗೆದಾರನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ವಿಷಯ ತಿಳಿದು ಹೆದ್ದಾರಿ ಗಸ್ತಿನಲ್ಲಿದ್ದ ಮುನಿರಾಬಾದ್ ಠಾಣೆ ಎಎಸ್‌ಐ ಬಾಬುರಾವ್ ಸ್ಥಳಕ್ಕೆ ಆಗಮಿಸಿ ಜಗಳ ನಿಲ್ಲಿಸಲು ಯತ್ನಿಸಿದ್ದಾರೆ. ಅವರ ಮಾತಿಗೂ ಬೆಲೆ ನೀಡದ ಪುಂಡರು ಅವರ ಮೇಲೂ ದಾಳಿ ಮಾಡಿದ್ದಾರೆ. ದಾಳಿಗೊಳಗಾದ ಎಇಇ ಹಾಗೂ ಚಾಲಕ ಪ್ರಶಾಂತ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ 14 ಜನರ ವಿರುದ್ಧ ಜಾತಿ ನಿಂದನೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಹಾಗೂ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿ 2ಪ್ರಕರಣ ದಾಖಲಾಗಿದೆ.

8 ಜನರ ಬಂಧನ
ಘಟನೆ ಸಂಬಂಧ ಟೋಲ್ ಕಲೆಕ್ಟರ್‌ಗಳಾದ ಸುರೇಶ್ ಗುಗ್ರಿ, ಗುರುಶಾಂತ, ಶರಣಯ್ಯ ಮತ್ತು ಗವಿಸಿದ್ದಪ್ಪ ಗುಗ್ರಿ, ಚಂದ್ರಪ್ಪ ಅಜ್ಜಿ, ಅಜಯ ಗುನ್ನಾಳ, ಮಾರುತಿ ಗುಗ್ರಿ, ದೇವರಾಜ ಚೌಡಕಿ, ದೇವರಾಜ ದ್ಯಾಮರಾಯ, ತಿಮ್ಮಣ್ಣ ಉಪ್ಪಾರ, ಶರಣಪ್ಪ ಉಪ್ಪಾರ, ಚೇತನ ಉಪ್ಪಾರ, ಅವಿನಾಶ ಕುಮಾರ, ಟೋಲ್ ಪ್ಲಾಜಾ ಮ್ಯಾನ್‌ಪವರ್ ಇನ್ಚಾರ್ಜ್ ಮಂಜುನಾಥ ಹಾಗೂ ಜಿಎಂಆರ್ ಟೋಲ್ ಪ್ಲಾಜಾ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿತರ ಪೈಕಿ ಪೊಲೀಸರು 8 ಜನರನ್ನು ಬಂಧಿಸಿದ್ದು, ಇತರರ ಬಂಧನಕ್ಕೆ ಜಾಲ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net