

ಬೆಂಗಳೂರು ಗ್ರಾಮಾಂತರ: ಕರೊನಾ ನಿಯಂತ್ರಣಕ್ಕೆ ಗ್ರಾಮಾಂತರ ಜಿಲ್ಲಾಡಳಿತ ಸಾಕಷ್ಟು ಶ್ರಮವಹಿಸಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದರು.
ದೇವನಹಳ್ಳಿ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಇದುವರೆಗೆ 3,422 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದ್ದು, 2,053 ಮಂದಿ ಗುಣಮುಖರಾಗಿದ್ದು, 1,359 ಪ್ರಕರಣ ಸಕ್ರಿಯವಾಗಿವೆ. 10 ಸಾವಿನ ಪ್ರಕರಣ ದಾಖಲಾಗಿದೆ. ಕೆಲವು ದಿನಗಳಿಂದ ಸೋಂಕಿತ ಪ್ರಕರಣ ಗಣನೀಯವಾಗಿ ತಗ್ಗಿದೆ. ಇದಕ್ಕೆ ಜಿಲ್ಲಾಡಳಿತ ಕಾರ್ಯವೈಖರಿಯೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಪುಣ್ಯ ದಿನವಿದು. ಸ್ವಾತಂತ್ರ್ಯಕ್ಕಾಗಿ ಕೋಟ್ಯಂತರ ಭಾರತೀಯರು ತ್ಯಾಗ ಬಲಿದಾನ ಮಾಡಿದ್ದಾರೆ. ಇಂದು ಭಾರತ ವಿಶ್ವಮಟ್ಟದಲ್ಲಿ ಛಾಪು ಮೂಡಿಸುವಲ್ಲಿ ಹೋರಾಟಗಾರರ ಬಲಿದಾನ ಕಾರಣ ಎಂದು ಸ್ಮರಿಸಿದರು.
ಭಾರತ ವಿಶ್ವಮಟ್ಟದ ರಾಷ್ಟ್ರಗಳ ಸಾಲಿನಲ್ಲಿ ಬಲಿಷ್ಠ ರಾಷ್ಟ್ರ ಎಂದು ಗುರುತಿಸಿಕೊಂಡಿದೆ. ತಂತ್ರಜ್ಞಾನ, ಬಾಹ್ಯಾಕಾಶ ವಿಭಾಗದಲ್ಲಿ ಹೆಸರುಗಳಿಸಿದೆ. ಕರೊನಾ ಮಹಾಮಾರಿ ದೇಶದ ಪ್ರಗತಿಗೆ ತಡೆಯೊಡ್ಡಿರುವ ನಡುವೆಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತಮ ಆಡಳಿತದೊಂದಿಗೆ ಜನಪರ ಕೆಲಸಕ್ಕೆ ಮುಂದಾಗಿವೆ ಎಂದರು.
ರಾಜ್ಯ ಸರ್ಕಾರ ಕೃಷಿ ಇಲಾಖೆ ಮೂಲಕ ದೇಶದಲ್ಲೇ ಪ್ರಥಮ ಬಾರಿಗೆ ರೈತರ ಬೆಳೆಗೆ ಮಾಹಿತಿಯನ್ನು **ಈಚಿಡಿಞಛಿಡಿ ಅಡಿಟಠಿ ಖ್ಠಡಿಛಿಥಿ ಂಠಿಠಿ 2020-21 ಮೂಲಕ ್ಠಠಿಟಟಚಿಜ ಮಾಡಲು ಸ್ವಾಭಿಮಾನಿ ರೈತರಿಗೆ ಸುವರ್ಣಾವಕಾಶ ಮಾಡಿಕೊಟ್ಟಿರುವುದರಿಂದ ರೈತರು ಬೆಳೆ ಸಮೀಕ್ಷೆ ಉತ್ಸವದಲ್ಲಿ ಪಾಲ್ಗೊಳ್ಳಲು ಕರೆ ನೀಡಿದೆ ಎಂದರು.
ಪೊಲೀಸ್ ಪಥಸಂಚಲನ: ಜಿಲ್ಲೆಯ ನಾಲ್ಕೂ ತಾಲೂಕುಗಳ ಪೊಲೀಸ್ ಇಲಾಖೆ ಶಿಸ್ತು ಬದ್ಧ ಪಥಸಂಚಲನದ ಮೂಲಕ ಗಮನ ಸೆಳೆಯಿತು. ಶಾಲಾಮಕ್ಕಳಿಲ್ಲದ ಕೊರತೆಯನ್ನು ಸಮಾರಂಭದಲ್ಲಿ ಪೊಲೀಸ್ ಇಲಾಖೆಯೇ ತುಂಬಿತು.
ಸಚಿವರಿಂದ ಧ್ವಜಾರೋಹಣ: ಕಂದಾಯ ಸಚಿವ ಆರ್.ಅಶೋಕ್ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಂಎಲ್‌ಸಿ ಎಂಟಿಬಿ ನಾಗರಾಜ್, ಶಾಸಕ ನಿಸರ್ಗ ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ, ಜಿಲ್ಲಾಧಿಕಾರಿ ರವೀಂದ್ರ, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ. ನಾಯಕ್ ಮತ್ತಿತರರು ತ್ರಿವರ್ಣದ ಬಲೂನುಗಳನ್ನು ಹಾರಿಬಿಡುವ ಮೂಲಕ ಸಂಭ್ರಮಕ್ಕೆ ಸಾಕ್ಷಿಯಾದರು.
ಕರೊನಾ ಸೇನಾನಿಗಳಿಗೆ ಸನ್ಮಾನ: ಜಿಲ್ಲೆಯಲ್ಲಿ ಕರೊನಾ ಕರ್ತವ್ಯದಲ್ಲಿ ನಿರತರಾದ ಕರೊನಾ ಸೇನಾನಿಗಳನ್ನು ಸನ್ಮಾನಿಸಿದ್ದು ವಿಶೇಷ ಗಮನ ಸೆಳೆಯಿತು.ಎಸ್ಸೆಸ್ಸೆಲ್ಸಿಯಲ್ಲಿ ಸಾಧಕ ವಿದ್ಯಾರ್ಥಿಗಳು ಸೇರಿ ಜಿಲ್ಲೆಯ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಪತ್ರಿಕಾ ಮಾಧ್ಯಮದ ಪರವಾಗಿ ವಿಜಯವಾಣಿ ಹಿರಿಯ ವರದಿಗಾರ ಶಿವರಾಜ ಎಂ.ಅವರನ್ನು ಸನ್ಮಾನಿಸಲಾಯಿತು.