ಶಹಾಬಾದ್​: ವಿವಿಧ ಬೇಡಿಕೆ ಈಡೇರಿಕೆಗಾಗಿ ರಸ್ತೆ ತಡೆ 9ರಂದು

PH 05
Published on

ಶಹಾಬಾದ್: ರಸ್ತೆ ದುರಸ್ತಿ, ಸಮರ್ಪಕ ಮೂಲಸೌಕರ್ಯ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅ.9ರಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ವಾಡಿ ಕ್ರಾಸ್‌ನ ರಾಷ್ಟಿçÃಯ ಹೆದ್ದಾರಿಯಲ್ಲಿ ಅನಿರ್ದಿಷ್ಟಾವಧಿ ರಸ್ತೆ ತಡೆ ನಡೆಸುವುದಾಗಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದಿದ್ದ ಒಕ್ಕೂಟದ ಸಭೆಯಲ್ಲಿ ಮಾತನಾಡಿ, ವಾಡಿ ಕ್ರಾಸ್‌ನಿಂದ ಮರಗೋಳ ಕ್ರಾಸ್, ಜೇವರ್ಗಿ ಕ್ರಾಸ್‌ವರೆಗಿನ 17 ಕಿಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮೂರು ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಯಾರೊಬ್ಬರೂ ಕ್ಯಾರೆ ಎನ್ನುತ್ತಿಲ್ಲ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಶಹಾಬಾದ್‌ಗೆ ನಿರಂತರ ಅನ್ಯಾಯವಾಗುತ್ತಿದೆ. ತಾಲೂಕಿಗೆ ವಾರಸುದಾರರೇ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಎರಡು ಸಲ ಟೆಂಡರ್ ಕರೆದು 6 ಕೋಟಿ ರೂ. ಖರ್ಚು ಮಾಡಿದರೂ ರಸ್ತೆ ಅಭಿವೃದ್ಧಿ ಕಂಡಿಲ್ಲ. ನಿತ್ಯ ಸಾಕಷ್ಟು ಜನ ಸಂಚರಿಸುತ್ತಾರೆ. ಸ್ವಲ್ಪ ಆಯತಪ್ಪಿದರೂ ಜೀವ ಹೋಗೋದು ಗ್ಯಾರಂಟಿ. ಯಾದಗಿರಿ ಜಿಲ್ಲೆ ಆಗುವುದಕ್ಕೂ ಮುನ್ನ ನಗರಸಭೆ ದರ್ಜೆಯ ಶಹಾಬಾದ್ ಸುಮಾರು ಒಂದು ಲಕ್ಷ ಜನಸಂಖ್ಯೆ ಹೊಂದಿದೆ. ಆದರೂ ನಗರದಲ್ಲಿ ಕನಿಷ್ಠ ಒಳಚರಂಡಿ ವ್ಯವಸ್ಥೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಾಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರ ಜೋರಾಗಿದ್ದು, ದುಡ್ಡು ಕೊಟ್ಟರೆ ಮಾತ್ರ ಕೆಲಸ ಎನ್ನುವಂತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರಾತ್ರಿ ವೈದ್ಯರು ಇರುವುದಿಲ್ಲ. ಬಡ ಜನತೆಗೆ ಗುಣಮಟ್ಟದ ಚಿಕಿತ್ಸೆ ಸಿಗದಂತಾಗಿದೆ. ಒಂದು ವೇಳೆ ಜನ ತಿರುಗಿ ಬಿದ್ದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೆಲಸ ಮಾಡಲು ಆಗಲ್ಲ. 9ರಂದು ನಡೆಯಲಿರುವ ರಸ್ತೆ ತಡೆ ಹೋರಾಟದಲ್ಲಿ ಸುಮಾರು 5000 ಜನ ಸೇರಲಿದ್ದಾರೆ. ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.

ಪ್ರಮುಖರಾದ ರಾಘವೇಂದ್ರ ಎಂ.ಜಿ., ಪೂಜಪ್ಪ ಮೇತ್ರೆ, ವಿಶ್ವರಾಜ ಫಿರೋಜಾಬಾದ್, ಮಲ್ಲಣ್ಣ ಮಸ್ಕಿ, ನಾಗಣ್ಣ ರಾಂಪುರೆ, ಗಣಪತರಾವ ಮಾನೆ, ಕಿರಣ, ಯಲ್ಲಾಲಿಂಗ, ಬಿ.ಸೇಠ್, ಜಗನ್ನಾಥ ಎಸ್.ಎಚ್. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net