ಆಶೀರ್ವಾದ ಇಲ್ಲದಿದ್ದರೆ ಚುನಾವಣೆ ಗೆಲ್ಲಲ್ಲು ಸಾಧ್ಯವಿಲ್ಲ: ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ

Shadakshara Shivacharya Swamiji supports Cauvery protest
Published on

ಮಂಡ್ಯ: ಕಾವೇರಿ ಮಾತೆಯ ಆಶೀರ್ವಾದ ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗದು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಧನಗೂರು ಮಠದ ಷಡಕ್ಷರ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಕಾವೇರಿ ಹೋರಾಟದಲ್ಲಿ ಶನಿವಾರ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ನಿರಂತರ ಅನ್ಯಾಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುನ್ನೆಚ್ಚರಿಕೆ ವಹಿಸದೆ ಕಡೆಗಣಿಸಿದ್ದಾರೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅಧಿಕಾರದ ಹುಮ್ಮಸ್ಸಿನಲ್ಲಿರುವ ಅವರಿಗೆ ಕಾವೇರಿ ಮಾತೆಯ ಆಶೀರ್ವಾದ ಬೇಕಾಗುತ್ತದೆ. ಹಾಗಾಗಿ ರೈತರ ಹಿತ ಕಾಯಲು ದೃಢ ನಿರ್ಧಾರ ಮಾಡಬೇಕೆಂದರು.

ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸುಗ್ರೀವಾಜ್ಞೆ ಜಾರಿಗೆ ತಂದು ರೈತರ ಕಾಯಲು ಮುಂದಾಗಿದ್ದರು. ಈಗಲೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಕಠಿಣ ನಿರ್ಧಾರಕ್ಕೆ ಮುಂದಾಗಬೇಕು. ಕೇಂದ್ರದ ಬಳಿಗೆ ತುರ್ತಾಗಿ ಸರ್ವ ಪಕ್ಷ ನಿಯೋಗ ಕೊಂಡೊಯ್ಯಬೇಕು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಆಳುವ ಸರ್ಕಾರಗಳ ಮಲತಾಯಿ ಧೋರಣೆ ಸಲ್ಲದು. ಅಂತೆಯೇ ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಪರಿಹಾರ ರೂಪಿಸಬೇಕಾಗಿದೆ ಎಂದರು.

ನಾಡು ನುಡಿ ಜಲ ವಿಚಾರದಲ್ಲಿ ರಾಜ್ಯದ ಪ್ರತಿಯೊಬ್ಬರು ಹೋರಾಟ ಮಾಡಬೇಕಾಗಿರುವುದು ಎಲ್ಲರ ಕರ್ತವ್ಯ. ಕನ್ನಂಬಾಡಿ ಕಟ್ಟೆ ನಿರ್ಮಾಣವಾದಾಗಿನಿಂದ ನೀರು ಹಂಚಿಕೆ ವಿಚಾರವಾಗಿ ಸಮಸ್ಯೆ ತಲೆದೂರಿದೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಗಂಗಾ ಮತ್ತು ಕಾವೇರಿ ನದಿ ಜೋಡಣೆಗೆ ಯೋಜನೆ ರೂಪಿಸಿದ್ದರು. ಅದು ಕಾರ್ಯಗತವಾಗಿದ್ದರೆ ಕಾವೇರಿ ನದಿ ನೀರಿನ ಸಮಸ್ಯೆ ಉಲ್ಬಣವಾಗುತ್ತಿರಲಿಲ್ಲ. ಇಂತಹ ಶಾಶ್ವತ ಪರಿಹಾರದ ಕಡೆ ಯೋಚಿಸಬೇಕಾಗಿದೆ. ವರುಣನ ಅವಕೃಪೆಯಿಂದ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ರೈತರು ಬೆಳೆ ಹಾಕಲು ನೀರಿಲ್ಲವಾಗಿದೆ. ಕುಡಿಯುವ ನೀರು ಸಂಕಷ್ಟ ಎದುರಾಗಲಿದೆ. ಆಳುವ ಸರ್ಕಾರಗಳ ನಿರ್ಧಾರ ಜನಪರ ಇರಲಿ. ಮುಂದಿನ ದಿನಗಳಲ್ಲಿ ಮಳೆಯಾಗಿ ನಾಡು ಸುಭಿಕ್ಷವಾಗಿರಲಿ ಎಂದು ಆಶಿಸಿದರು.

ಲಿಂಗಪಟ್ಟಣದ ಓಂಕಾರೇಶ್ವರ ಸ್ವಾಮಿ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ರೈತರ ಹಿತ ಕಡೆಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರೆ ರಾಜ್ಯದ ಹಿತ ಕಾಯಲು ಮುಂದಾಗಿರುವುದು ಸರಿಯಲ್ಲ. ಕಾವೇರಿ ಉಳಿವಿಗಾಗಿ ಕರುನಾಡು ಮಿಡಿಯುತ್ತಿದೆ. ಕದ್ದು ಮುಚ್ಚಿ ನೀರು ಬಿಡುವ ಮೂಲಕ ಜಲಾಶಯ ಬರಿದು ಮಾಡಬೇಡಿ. ದೃಢ ನಿರ್ಧಾರದ ಮೂಲಕ ನೀರು ಉಳಿಸಲು ಮುಂದಾಗಬೇಕು. ಪ್ರಸ್ತುತ ಸನ್ನಿವೇಶದಲ್ಲಿ ರೈತರ ಬೆಳೆಗೆ ನೀರಿಲ್ಲದಂತಾಗಿದೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸಲಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ, ಈಗಲೇ ಎಚ್ಚೆತ್ತುಕೊಳ್ಳಬೇಕೆಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net