ಶಾದಿಭಾಗ್ಯ ಅರ್ಜಿ ಅತಂತ್ರ

MARRIAGE
Published on

ಗೋಪಾಲಕೃಷ್ಣ ಪಾದೂರು ಉಡುಪಿ
ರಾಜ್ಯ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಶಾದಿಭಾಗ್ಯ ಯೋಜನೆಗೆ ಅನುದಾನ ಸ್ಥಗಿತಗೊಳಿಸಿದ ಕಾರಣ ಉಡುಪಿ ಜಿಲ್ಲೆಯಲ್ಲಿ 390 ಹಾಗೂ ದ.ಕ. ಜಿಲ್ಲೆಯಲ್ಲಿ 2645 ಅರ್ಜಿಗಳ ಸ್ಥಿತಿ ಅತಂತ್ರವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ 6 ವರ್ಷಗಳಲ್ಲಿ 1564 ಮಂದಿ ಅರ್ಜಿ ಸಲ್ಲಿಸಿದ್ದು, 1061 ಅರ್ಹ ಫಲಾನುಭವಿಗಳಿಗೆ ತಲಾ 50 ಸಾವಿರ ರೂ.ಅನುದಾನ ಮಂಜೂರಾಗಿದೆ. 345 ಮುಸ್ಲಿಂ, 43 ಕ್ರಿಶ್ಚಿಯನ್, 2 ಜೈನ ಧರ್ಮದ ಒಟ್ಟು 390 ಅರ್ಜಿಗಳು ಬಾಕಿ ಉಳಿದಿವೆ.
ರಾಜ್ಯ ಸರ್ಕಾರ 2020-21ನೇ ಸಾಲಿನ ಆಯವ್ಯಯದಲ್ಲಿ ಬಿದಾಯಿ ಯೋಜನೆಗೆ ಅನುದಾನ ನಿಗದಿಪಡಿಸಿಲ್ಲ. ಹೀಗಾಗಿ ಹೊಸ ಅರ್ಜಿಗಳ ಸ್ವೀಕಾರವನ್ನು ಮಾ.7ರಿಂದ ಸ್ಥಗಿತಗೊಳಿಸುವಂತೆ ಅಲ್ಪಸಂಖ್ಯಾತರ ನಿರ್ದೇಶನಾಲಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಏನಿದು ಶಾದಿಭಾಗ್ಯ ಯೋಜನೆ?: ಬಿದಾಯಿ(ಶಾದಿ ಭಾಗ್ಯ) ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಿಪಿಎಲ್ ಕುಟುಂಬದ ಹೆಣ್ಮಕ್ಕಳ ಮದುವೆಗೆ 50 ಸಾವಿರ ರೂ.ಸಹಾಯಧನ ನೀಡಲಾಗುತ್ತದೆ. ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಪಾರ್ಸಿ, ಬೌದ್ಧ ಧರ್ಮದ ಹುಡುಗಿಯರು ಯೋಜನೆ ಲಾಭ ಪಡೆಯಲು ಅರ್ಹರು. 6 ವರ್ಷಗಳಲ್ಲಿ ಜಿಲ್ಲೆಯಲ್ಲಿ 5,30,500 ಸಾವಿರ ರೂ. ಸಹಾಯಧನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.

ಕರಾವಳಿಯಲ್ಲಿ ಬೌದ್ಧ ಫಲಾನುಭವಿಗಳಿಲ್ಲ: 2013-14ನೇ ಸಾಲಿನಲ್ಲಿ 40 ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಜೈನ್ ತಲಾ ಒಬ್ಬರು ಸೇರಿ 42 ಮಂದಿಗೆ ಯೋಜನೆಯ ಲಾಭ ದೊರೆತಿದೆ. 2014-15ರಲ್ಲಿ 76 ಮುಸ್ಲಿಂ, 35 ಕ್ರಿಶ್ಚಿಯನ್, 1 ಜೈನ್, 2015-16ರಲ್ಲಿ 53 ಮುಸ್ಲಿಂ, 80 ಕ್ರಿಶ್ಚಿಯನ್, 1 ಜೈನ್, 2016-17ರಲ್ಲಿ 90 ಮುಸ್ಲಿಂ, 131 ಕ್ರಿಶ್ಚಿಯನ್, 14 ಜೈನ್, 2017-18ರಲ್ಲಿ 180 ಮುಸ್ಲಿಂ, 60 ಕ್ರಿಶ್ಚಿಯನ್, 4 ಜೈನ್, 2018-19ರಲ್ಲಿ 103 ಮುಸ್ಲಿಂ, 75 ಕ್ರಿಶ್ಚಿಯನ್, 9 ಜೈನ, 2019-20ನೇ ಸಾಲಿನಲ್ಲಿ 80 ಮುಸ್ಲಿಂ, 27 ಕ್ರಿಶ್ಚಿಯನ್ ಫಲಾನುಭವಿಗಳಿಗೆ ಅನುದಾನ ಲಭಿಸಿದೆ. ಒಟ್ಟು 622 ಮುಸ್ಲಿಂ, 409 ಕ್ರಿಶ್ಚಿಯನ್, 30 ಜೈನ ಸಮುದಾಯದ ಯುವತಿಯರು ಯೋಜನೆ ಪ್ರಯೋಜನ ಪಡೆದಿದ್ದಾರೆ. ಆದರೆ ಕರಾವಳಿಯಲ್ಲಿ ಬೌದ್ಧ, ಪಾರ್ಸಿ, ಸಿಕ್ಖ್ ಸಮುದಾಯದಿಂದ ಅರ್ಜಿ ಸಲ್ಲಿಕೆಯಾಗಿಲ್ಲ. ದ.ಕ. ಜಿಲ್ಲೆಯಲ್ಲಿ 2013-14ರಿಂದ 2018-19ರವರೆಗೆ ಒಟ್ಟು 4508 ಫಲಾನುಭವಿಗಳಿಗೆ 22.54 ಕೋಟಿ ರೂ.ಸಹಾಯಧನ ಮಂಜೂರು ಮಾಡಲಾಗಿದ್ದು, 2018, ಮೇ 12ರಿಂದ ಒಟ್ಟು 2645 ಅರ್ಜಿಗಳು ಬಾಕಿ ಉಳಿದಿವೆ.

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡದ ಕಾರಣ ಯೋಜನೆ ಸ್ಥಗಿತವಾಗಿದೆ. ಹೀಗಾಗಿ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನೂ ನಿಲ್ಲಿಸಲಾಗಿದೆ. ಆಯುಕ್ತರ ಸೂಚನೆ ಮೇರೆಗೆ ಬಾಕಿ ಉಳಿದಿರುವ ಅರ್ಜಿಗಳ ಪಟ್ಟಿಯನ್ನು ಸರ್ಕಾರಕ್ಕೆ ಮಾ.9ರಂದು ಸಲ್ಲಿಸಲಾಗಿದೆ. - ದಯಾನಂದ್, ಪ್ರಭಾರ ಉಪ ವ್ಯವಸ್ಥಾಪಕ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net