

ಮೈಸೂರು: ಹಾಸನದಲ್ಲಿ ನಡೆದಿರುವ ಮಹಿಳೆಯರ ಲೈಂಗಿಕ ಶೋಷಣೆ ಪ್ರಕರಣಕ್ಕೆ ಸಂಬಂಧಿಸಿದ ಪೆನ್ ಡ್ರೈವ್ ಹಂಚಿಕೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂಬ ಆರೋಪ ಸತ್ಯಕ್ಕೆ ದೂರ ಎಂದು ನಗರ ಕಾಂಗ್ರೆಸ್ ವಕ್ತಾರ ಎಸ್.ರಾಜೇಶ್ ಹೇಳಿದರು.
ಉದ್ಯೋಗ ಕೋರಿ ಬಂದ ಮಹಿಳೆಯರು, ವರ್ಗಾವಣೆ ಕೋರಿ ಬಂದ ಅಸಹಾಯಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಸಂಸದ ಪ್ರಜ್ವಲ್ ರೇವಣ್ಣ ಈ ರೀತಿ ಅಪಾರ ಸಂಖ್ಯೆಯ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದು ಬೇಸರ ತರಿಸುತ್ತದೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಮಹಿಳೆಯರ ಮಾನ ಹರಾಜು ಮಾಡಿದ್ದಾರೆ. ಆಮಿಷವೊಡ್ಡಿ, ಬಲಾತ್ಕಾರವಾಗಿ, ಹೆದರಿಸಿ, ಬೆದರಿಸಿ ಮಹಿಳೆಯರೊಂದಿಗೆ ವಿಡಿಯೋ ಕಾಲ್ ಮಾಡಿ ನಂತರ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿರುವುದು ಅಮಾನವೀಯ ಕೃತ್ಯ ಎಂದು ತಿಳಿಸಿದರು.
ಹೀಗಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ಇದನ್ನು ವಿರೋಧಿಸದಿರುವುದು ಮಹಿಳೆಯರ ಕಡೆಗಣೆನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.