

ಮಂಗಳೂರು: ನಗರದ ಖ್ಯಾತ ವಕೀಲರೊಬ್ಬರು ತನ್ನ ಕಚೇರಿಗೆ ತರಬೇತಿಗೆ ಬರುತ್ತಿದ್ದ ಕಾನೂನು ಪದವಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಹಾಗೂ ಇನ್ನೋರ್ವ ಯುವತಿಗೆ ಬೆದರಿಕೆ ಹಾಕಿರುವ ಬಗ್ಗೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೋಕಾಯುಕ್ತ ಪರ ಅಭಿಯೋಜಕರೂ ಆಗಿರುವ ಕೆ.ಎಸ್.ಎನ್.ರಾಜೇಶ್ ವಿರುದ್ಧ ಇಬ್ಬರು ಯುವತಿಯರು ದೂರು ನೀಡಿದ್ದಾರೆ. ಇಂಟಟರ್ನ್‌ಶಿಪ್‌ಗೆಂದು ಬರುತ್ತಿದ್ದ ಸಂದರ್ಭದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಓರ್ವ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಇದೇ ವೇಳೆ ಕಿರುಕುಳಕ್ಕೀಡಾದ ವಿದ್ಯಾರ್ಥಿನಿಯ ಸ್ನೇಹಿತೆ ಇನ್ನೊಂದು ದೂರು ನೀಡಿದ್ದಾಳೆ. ಆಕೆಯನ್ನು ಕೌನ್ಸೆಲಿಂಗ್‌ಗೆ ಕರೆದುಕೊಂಡು ಹೋಗುವುದಾಗಿ, ಕಾನೂನು ನೆರವು ನೀಡುವುದಾಗಿ ಮಹಿಳಾ ಸಂಘಟನೆ ಹೆಸರು ಹೇಳಿ ಬೇರೆ ಕಡೆಗೆ ಕರೆದೊಯ್ದು ಬೆದರಿಕೆ ಹಾಕಿರುವುದಲ್ಲದೆ, ತನಗೆ ಪೂರಕವಾಗಿಯೇ ಹೇಳಿಕೆ ನೀಡುವಂತೆ ವಕೀಲ ರಾಜೇಶ್ ಒತ್ತಡ ಹೇರಿದ್ದಾಗಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಿಳಾ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
ಆಡಿಯೋ ಕ್ಲಿಪ್ ವೈರಲ್: ಕೆಲದಿನಗಳ ಹಿಂದೆಯಷ್ಟೇ ವಕೀಲ-ಯುವತಿ ನಡುವಿನ ಮಾತುಕತೆ ಆಡಿಯೋ ಕ್ಲಿಪ್ ವೈರಲ್ ಆಗಿತ್ತು. ನನ್ನನ್ನು ಇದೊಂದು ಬಾರಿ ಕ್ಷಮಿಸಬೇಕು. ಇನ್ನು ಮುಂದೆ ಏನೂ ಮಾಡುವುದಿಲ್ಲ. ಕಚೇರಿಗೆ ಬರಬೇಕು ಎಂದು ವಕೀಲ ಗೋಗರೆಯುವ ಮಾತುಗಳು ಅದರಲ್ಲಿದ್ದವು. ಬಳಿಕ ಸಂತ್ರಸ್ತೆ, ನನಗೆ ಅಂತಹ ಅನುಭವ ಆಗಿಲ್ಲ ಎಂದು ತಿಳಿಸುವ ಪತ್ರವೊಂದೂ ಬಿಡುಗಡೆಯಾಗಿತ್ತು. ಇದರ ಹಿನ್ನೆಲೆಯಲ್ಲಿ ಸೋಮವಾರ ಎಬಿವಿಪಿ ಪ್ರಮುಖರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ, ತಪ್ಪಿತಸ್ಥ ವಕೀಲನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಬ್ಲಾಕ್‌ಮೇಲ್ ಆರೋಪ: ಇನ್ನೊಂದೆಡೆ, ಎಡಿಟ್ ಮಾಡಿರುವ ವಾಯ್ಸ ಮೆಸೇಜನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ನನ್ನನ್ನು ಬ್ಲಾಕ್‌ಮೇಲ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ವಕೀಲ ರಾಜೇಶ್ ಮೂರು ದಿನಗಳ ಹಿಂದೆ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಸಂತ್ರಸ್ತ ಯುವತಿಯ ಸ್ನೇಹಿತೆ ಠಾಣೆಗೆ ಬಂದ ನಂತರ ದೂರನ್ನು ಅಲ್ಲಿಗೇ ಕೊನೆಗೊಳಿಸಲಾಗಿತ್ತು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಆರೋಪಿ ನಾಪತ್ತೆ: ಪ್ರಕರಣದ ಆರೋಪಿ ಕೆ.ಎಸ್.ಎನ್.ರಾಜೇಶ್‌ರನ್ನು ಪೊಲೀಸರು ಬಂಧಿಸುವುದಕ್ಕೆಂದು ಮಂಗಳವಾರ ಅವರ ಕಚೇರಿಗೆ ತೆರಳಿದಾಗ ಬೀಗ ಹಾಕಿತ್ತು. ಹಾಗಾಗಿ ಮಂಗಳವಾರ ಆರೋಪಿಯ ಬಂಧನವಾಗಿಲ್ಲ. ಸದ್ಯಕ್ಕೆ ನಾಪತ್ತೆಯಾಗಿರುವ ರಾಜೇಶ್ ವಿಡಿಯೊ ಕ್ಲಿಪ್‌ವೊಂದನ್ನು ಹರಿಯಬಿಟ್ಟಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನನ್ನು ಪ್ರಕರಣದಲ್ಲಿ ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ, ಇದರಿಂದ ಧೃತಿಗೆಡುವುದಿಲ್ಲ. ತನಿಖೆಯಲ್ಲಿ ಇದೊಂದು ಸುಳ್ಳು ಫಿರ್ಯಾದಿ ಎನ್ನುವುದು ಬಯಲಾಗಲಿದೆ. ನನ್ನ ಏಳಿಗೆ ಸಹಿಸದವರು ಮಾನಹಾನಿ ಮಾಡಲು ಹಾಗೂ ಹಣ ವಸೂಲಿಗೆ ಮಾಡಿದ ಕೃತ್ಯ ಇದು ಎಂದು ವಿಡಿಯೋದಲ್ಲಿ ವಕೀಲರು ಹೇಳಿದ್ದಾರೆ.
ವಕೀಲನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಆರೋಪ ಗಂಭೀರವಾಗಿರುವುದರಿಂದ ಹಾಗೂ ಪಾರದರ್ಶಕವಾಗಿರಲಿ ಎಂಬ ಕಾರಣಕ್ಕೆ ತನಿಖಾಧಿಕಾರಿಯನ್ನಾಗಿ ದಕ್ಷಿಣ ಎಸಿಪಿ ರಂಜಿತ್ ಬಂಡಾರು ಅವರನ್ನು ನೇಮಿಸಲಾಗಿದೆ. ಆ ಬಳಿಕ ಏನೇನು ಅಂಶಗಳು ಕಂಡು ಬರುತ್ತದೆ ಎನ್ನುವುದರ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
- ಶಶಿಕುಮಾರ್, ನಗರ ಪೊಲೀಸ್ ಆಯುಕ್ತ