

ಬೆಂಗಳೂರು: ಪಿ.ಜಿ.ಯಲ್ಲಿ (ಪೇಯಿಂಗ್ ಗೆಸ್ಟ್) ಸ್ವಚ್ಛತಾ ಕೆಲಸ ಮಾಡುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.
ಕಮಲನಗರದ ನಿವಾಸಿ 32 ವರ್ಷದ ಮಹಿಳೆ ಸಂತ್ರಸ್ತೆ. ಆರೋಪಿಗಳಾದ ಪ್ರಭು (35) ಮತ್ತು ಈತನ ಸ್ನೇಹಿತ ರೌಡಿ ಶಿವು (38)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಾಜಿನಗರದ 1ನೇ ಬ್ಲಾಕ್ನಲ್ಲಿರುವ ಪಿ.ಜಿ.ಯಲ್ಲಿ ಮಹಿಳೆ ಸ್ವಚ್ಛತಾ ಕೆಲಸ ಮಾಡುತ್ತಿದ್ದರು. ಪ್ರಭು ಅಲ್ಲಿ ಮೇಲ್ವಿಚಾರಕನಾಗಿದ್ದ. ಸಂತ್ರಸ್ತೆ ಕೊಠಡಿ ಸ್ವಚ್ಛತೆಯಲ್ಲಿ ತೊಡಗಿದ್ದಾಗ ಆತ ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವಿಚಾರವನ್ನು ಪತಿಗೆ ಹೇಳಿದ್ದರು. ಬಳಿಕ ಪತಿ, ಪಿಜಿ ಮಾಲೀಕರ ಗಮನಕ್ಕೆ ತಂದಿದ್ದ ಹಿನ್ನೆಲೆಯಲ್ಲಿ ಪ್ರಭುವನ್ನು ಕೆಲಸದಿಂದ ತೆಗೆದು ಹಾಕಿದ್ದರು. ಆ ನಂತರವೂ ಆರ ಮಹಿಳೆಯನ್ನು ಹಿಂಬಾಲಿಸುತ್ತಿದ್ದ. ಅಲ್ಲದೆ, ತನ್ನ ಸ್ನೇಹಿತ ರೌಡಿ ಶಿವು ಎಂಬಾತನಿಂದ ಕರೆ ಮಾಡಿಸಿ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿಸಿದ್ದ. ಮಾ.10ರಂದು ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಕೈ ಹಿಡಿದು ಎಳೆದು ಅಸಭ್ಯವಾಗಿ ವರ್ತಿಸಿದ್ದ.