ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ!

2
Published on

ಮಾದನಾಯಕನಹಳ್ಳಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

ನೆಲಮಂಗಲ: ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಖಾಸಗಿ ಶಾಲೆ ಮಾಲೀಕನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಕಿತ್ತನಹಳ್ಳಿ ಗ್ರಾಮದ ಬಳಿಯ ಖಾಸಗಿ ಶಾಲೆಯೊಂದರ ಮಾಲೀಕ ಹಾಗೂ ಕಾರ್ಯದರ್ಶಿ ಈರತ್ತಯ್ಯ(50) ಬಂಧಿತ. ಆರೋಪಿ ತನ್ನ ಕ್ಯಾಬಿನ್‌ಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಅವರ ಅಂಗಾಂಗಗಳನ್ನು ಮುಟ್ಟಿ ವಿಕೃತ ಆನಂದ ಪಡುತ್ತಿದ್ದ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ.

ಕ್ಯಾಬಿನ್‌ನಲ್ಲಿ ಕಿರುಕುಳ: 4 ತಿಂಗಳ ಹಿಂದೆ ವಿದ್ಯಾರ್ಥಿನಿಯನ್ನು ಕಚೇರಿಗೆ ಕರೆಸಿಕೊಂಡು ಅಸಭ್ಯ ಮಾತುಗಳಿಂದ ಕಿರುಕುಳ ನೀಡಿದ್ದ, ಭಯಪಟ್ಟು ಯಾರ ಬಳಿಯೂ ವಿದ್ಯಾರ್ಥಿನಿಯು ಹೇಳಿಕೊಳ್ಳದೆ ಮಾನಸಿಕವಾಗಿ ಕುಗ್ಗಿದ್ದಳು. ಆಗಾಗ ಭಾನುವಾರದಂದು ವಿಶೇಷ ತರಗತಿ ಇದೆ ಎಂದು ಶಾಲೆಗೆ ಕರೆಸಿಕೊಂಡು ಇದೇರೀತಿ ಕಿರುಕುಳ ನೀಡುತ್ತಿದ್ದ, ಶಾಲಾ ಬಸ್‌ನಲ್ಲಿ ಹೋಗುವಾಗ ಇನ್ನಿತರ ಮಕ್ಕಳು ಇಳಿದ ಮೇಲೆ ಕೊನೆಯ ಸೀಟ್‌ನಲ್ಲಿ ಕೆಲ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ ತೋರಿಸುತ್ತಿದ್ದ ಎಂದು ಅಳಲು ತೋಡಿಕೊಂಡಿರುವ ವಿದ್ಯಾರ್ಥಿನಿ, ಶಾಲಾ ಶಿಕ್ಷಕರು ಹಾಗೂ ಪಾಲಕರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಹೆಣ್ಣುಮಕ್ಕಳನ್ನು ಹಣ್ಣಿಗೆ ಹೋಲಿಕೆ: ಆರೋಪಿ ಹೆಣ್ಣು ಮಕ್ಕಳ ಅಂಗಾಂಗ ಮುಟ್ಟಿ ಹಣ್ಣುಗಳಿಗೆ ಹೋಲಿಕೆ ಮಾಡುತ್ತಿದ್ದ ಎಂಬ ಬಗ್ಗೆ ಶಾಲಾ ಶಿಕ್ಷಕರು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದು, ಮಾದನಾಯಕನಹಳ್ಳಿಯ ಪೊಲೀಸರು ಆರೋಪಿಯನ್ನು ಬಂಧಿಸಿ, ಪ್ರಾಥಮಿಕ ಹಂತದ ತನಿಖೆ ನಡೆಸಿ, ಪೋಕ್ಸೋ ಕಾಯ್ದೆ ಅಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆರೋಪಿ ಒಬ್ಬಳನ್ನೇ ಅವರ ಕ್ಯಾಬಿನ್‌ಗೆ ಕರೆಸಿಕೊಂಡು ಚುಂಬಿಸುತ್ತಿದ್ದರು. ಖಾಸಗಿ ಅಂಗಾಂಗಗಳ ಬಗ್ಗೆ ಅಸಹ್ಯವಾಗಿ ಮಾತನಾಡಿದರು. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಹೆದರಿಸಿದ್ದರಿಂದ ಎಲ್ಲವನ್ನು ಸಹಿಸಿಕೊಂಡಿದ್ದೆ ಎಂದು ವಿದ್ಯಾರ್ಥಿನಿಯೊಬ್ಬರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net