

ಶಿವಮೊಗ್ಗ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಇಬ್ಬರಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಫ್‌ಟಿಎಸ್‌ಸಿ(ತ್ವರಿತ ವಿಶೇಷ ನ್ಯಾಯಾಲಯ)-1ರ ನ್ಯಾಯಾಧೀಶರು 20 ವರ್ಷ ಕಠಿಣ ಕಾರಾವಾಸ ಶಿಕ್ಷೆ ವಿಧಿಸಿದ್ದಾರೆ.
ಶಿವಮೊಗ್ಗ ತಾಲೂಕಿನ 37 ಮತ್ತು 39 ವರ್ಷದ ಇಬ್ಬರು ಶಿಕ್ಷೆಗೆ ಒಳಗಾದವರು. 2023ರಲ್ಲಿ ಇಬ್ಬರು ಸೇರಿಕೊಂಡು 14 ವರ್ಷದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು. ಈ ಬಗ್ಗೆ ಕುಂಸಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖಾಧಿಕಾರಿಯಾಗಿದ್ದ ಕುಂಸಿ ಠಾಣೆ ಇನ್‌ಸ್ಪೆಕ್ಟರ್ ಹರೀಶ್ ಪಾಟೀಲ್ ಅವರು ಪ್ರಕರಣದ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇಬ್ಬರ ಮೇಲಿನ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶ ಜೆ.ಎಸ್.ಮೋಹನ್ ಅವರು ಇಬ್ಬರಿಗೂ 20 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. 37 ವರ್ಷದ ಆಪಾಧಿತನಿಗೆ 1.15 ಲಕ್ಷ ರೂ. ಹಾಗೂ 39 ವರ್ಷದ ಆಪಾದಿತನಿಗೆ 1.05 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲರಾದಲ್ಲಿ ತಲಾ ಒಂದು ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ 2 ಲಕ್ಷ ರೂ. ಮತ್ತು ಸರ್ಕಾರದಿಂದ 10 ಲಕ್ಷ ರೂ.ಗಳನ್ನು ನೊಂದ ಬಾಲಕಿಗೆ ಪರಿಹಾರ ರೂಪದಲ್ಲಿ ನೀಡಲು ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಎಚ್.ಆರ್.ಶ್ರೀಧರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.