ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ, ವೃದ್ಧನಿಗೆ 20 ವರ್ಷ ಜೈಲು

dist Court building
ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
Published on

ಶಿವಮೊಗ್ಗ: ಒಂಬತ್ತು ವರ್ಷದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ವೃದ್ಧನಿಗೆ ಶುಕ್ರವಾರ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಫ್‌ಟಿಎಸ್‌ಸಿ(ತ್ವರಿತ ವಿಶೇಷ ನ್ಯಾಯಾಲಯ)-1ರ ನ್ಯಾಯಾಧೀಶರು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 2.10 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲನಾದರೆ ಒಂದು ವರ್ಷ ಕಾರಾಗೃಹ ಶಿಕ್ಷೆ ನೀಡಿ ಆದೇಶಿಸಿದ್ದಾರೆ.

ಭದ್ರಾವತಿ ತಾಲೂಕಿನ 70 ವರ್ಷದ ವೃದ್ಧ ಶಿಕ್ಷೆಗೆ ಒಳಗಾದವ. ಈತ 2023ರಲ್ಲಿ 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಸಂತ್ರಸ್ತೆ ತಾಯಿ ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖಾಧಿಕಾರಿ ಆರ್.ಎಲ್.ಲಕ್ಷ್ಮೀಪತಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಜೆ.ಎಸ್.ಮೋಹನ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವೃದ್ಧನಿಗೆ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ ಎರಡು ಲಕ್ಷ ರೂ.ಮತ್ತು ಸರ್ಕಾರದಿಂದ 2 ಲಕ್ಷ ರೂ. ಅನ್ನು ಬಾಲಕಿಗೆ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಎಚ್.ಆರ್.ಶ್ರೀಧರ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net