ಆರೋಪಿ ಮನೆ ಶೋಧಿಸಿದ ಪೊಲೀಸರು

03 CHN 1
Published on

ಚನ್ನಗಿರಿ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿರುವ ಪೊಲೀಸರು, ಭಾನುವಾರ ಆರೋಪಿ ಅಮ್ಜದ್​ನ ಅಂಗಡಿ ಹಾಗೂ ಮನೆಯ ಪಂಚನಾಮೆ ನಡೆಸಿ ಕೆಲವು ದಾಖಲೆ ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯ ಡಿವೈಎಸ್​ಪಿ ಪದ್ಮಶ್ರೀ ಗುಂಜಿಕರ್ ನೇತೃತ್ವದ ತಂಡ ಬೆಳಗ್ಗೆ 6 ಗಂಟೆಗೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಆರೋಪಿಯನ್ನು ಕರೆತಂದು ಆತನ ಅಂಗಡಿ ಮತ್ತು ಮನೆಯ ಬೀಗ ತೆಗೆದು ತನಿಖೆ ನಡೆಸಿತು.

ಪ್ರಕರಣಕ್ಕೆ ಪೂರಕವಾಗಿ ಕೆಲವು ದಾಖಲೆಗಳು, ಮೊಬೈಲ್ ಮತ್ತು ಡ್ರಗ್ಸ್ ವಶಕ್ಕೆ ತೆಗೆದುಕೊಂಡ ಪೊಲೀಸರು, ಪಟ್ಟಣದ ಮೇದಾರ ಬೀದಿಯಲ್ಲಿ ವಾಸವಿದ್ದ ಮನೆಗೂ ಕರೆತಂದು ತನಿಖೆ ಕೈಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್​ಪಿ ಪದ್ಮಶ್ರೀ ಗುಂಜಿಕರ್, ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಮೇಲೆ ಪೋಕ್ಸೋ ಮತ್ತು ಸುಮೊಟೋ ಪ್ರಕರಣ ದಾಖಲಾಗಿವೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶದಂತೆ ಸಾರ್ವಜನಿಕರು ಯಾವುದೇ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುವುದು ಅಪರಾಧ. ತನಿಖೆಗೆ ಸಹಕಾರ ನೀಡಬೇಕು ಎಂದರು.

ಮೇಲಧಿಕಾರಿಗಳ ಆದೇಶದಂತೆ ಆರೋಪಿಯನ್ನು ಸ್ಥಳದ ಪಂಚನಾಮೆಗೆ ಕರೆತರಲಾಗಿದೆ. ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಅಂಗಡಿಯಲ್ಲಿ ಸಿಕ್ಕ ಮೊಬೈಲ್​ಗಳನ್ನು ಸೀಜ್ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ ಎಂದರು.

ಸಿಪಿಐ ರವೀಶ್, ಪಿಎಸ್​ಐ ಸುರೇಶ್ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net