

ಕಾರವಾರ: ಭಟ್ಕಳ ತಾಲೂಕಿನದಲ್ಲಿ 1016 ಲಿಂಗಾನುಪಾತ ಕಳೆದ ವರ್ಷದಲ್ಲಿ ದಾಖಲಾಗಿದ್ದು, ಹೆಣ್ಣು ಭ್ರೂಣ ಹತ್ಯೆ ತಡೆ, ಹೆಣ್ಣು ಮಕ್ಕಳ ರಕ್ಷಣೆಯ ಹೋರಾಟದಲ್ಲಿ ಹೊಸ ಆಶಾ ಕಿರಣ ಮೂಡಿದಂತಾಗಿದೆ.
ಲಿಂಗಾನುಪಾತ ಸರಿದೂಗಿಸುವ ಸಲುವಾಗಿ ಸರ್ಕಾರ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತದೆ. ಆದರೂ ಜಿಲ್ಲೆಯಲ್ಲಿ ಸರಾಸರಿ 1 ಸಾವಿರ ಗಂಡು ಮಕ್ಕಳಿಗೆ ಹೋಲಿಸಿದರೆ ಕೇವಲ 967 ಹೆಣ್ಣು ಮಕ್ಳಳಿದ್ದಾರೆ. ಎಂದರೆ 967 ಮಾತ್ರ ಲಿಂಗಾನುಪಾತವಿದೆ. ಆದರೆ, ಜಿಲ್ಲೆಯ ಭಟ್ಕಳ, ಯಲ್ಲಾಪುರ ತಾಲೂಕುಗಳಲ್ಲಿ ಮಾತ್ರ ಈ ಅನುಪಾತ ಉತ್ತಮವಾಗಿದ್ದು, ಖುಷಿಯ ಸಂಗತಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಾಖಲೆಗಳು ಹೇಳುತ್ತವೆ.
ಭಟ್ಕಳ ತಾಲೂಕಿನಲ್ಲಿ ಈ 2023ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 986 ಗಂಡು ಮತ್ತು 1002 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 1016 ಆಗಿದೆ . ಅಲ್ಲದೇ ಕಳೆದ 2022 ರ ಏಪ್ರಿಲ್‌ನಿಂದ 2023ರ ಮಾರ್ಚ್ವರೆಗೆ ಒಟ್ಟು 1469 ಗಂಡು ಮತ್ತು 1471 ಹೆಣ್ಣು ಮಕ್ಕಳು ಸೇರಿದಂತೆ 2940 ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 1001 ಆಗಿತ್ತು. 2018-19 ನೇ ಸಾಲಿನಲ್ಲಿ ಭಟ್ಕಳದ ಲಿಂಗಾನುಪಾತ ಅತಿ ಕಡಿಮೆ ಎಂದರೆ 938 ಇದ್ದಿದ್ದು, ನಾಲ್ಕೈದು ವರ್ಷಗಳಲ್ಲಿ ಭಾರಿ ಏರಿಕೆ ಕಂಡಿರುವುದು ಗಮನಾರ್ಹವಾಗಿದೆ.
ಯಲ್ಲಾಪುರ ತಾಲೂಕುನಲ್ಲಿ ಲಿಂಗಾನುಪಾತದ ಪ್ರಮಾಣ 1000 ಇದೆ. ಈ ವರ್ಷ ಪ್ರಸಕ್ತ ಸಾಲಿನಲ್ಲಿ ಡಿಸೆಂಬರ್‌ವರೆಗೆ 197 ಹೆಣ್ಣು ಮಕ್ಕಳು ಮತ್ತು ಅಷ್ಟೇ ಗಂಡು ಮಕ್ಕಳು ಜನಿಸಿದ್ದಾರೆ. ಕುಮಟಾ ತಾಲೂಕು ಜಿಲ್ಲೆಯಲ್ಲಿ 3ನೇ ಸ್ಥಾನದಲ್ಲಿದ್ದು 955 ಗಂಡು ಮತ್ತು 952 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 997. ಜಿಲ್ಲೆಯಲ್ಲಿ ಅತೀ ಕಡಿಮೆ ಲಿಂಗಾನುಪಾತದ ಪ್ರಮಾಣ ಕಾರವಾರ ಮತ್ತು ಮುಂಡಗೋಡನಲ್ಲಿದ್ದು ಅಲ್ಲಿನ ಪ್ರಮಾಣ 869 ಇದೆ.
ಇದನ್ನೂ ಓದಿ: ರಸ್ತೆಯ ಹಣ ಗ್ಯಾರಂಟಿಗೆ-ರೂಪಾಲಿ ಆರೋಪ
ವರ್ಷ ಲಿಂಗಾನುಪಾತ
2018-19 970
2019-20 965
2020-21 951
2021-22 950
2022-23 951
ಪ್ರಕೃತಿದತ್ತವಾಗಿ ಹಾಗೂ ವೈಜ್ಞಾನಿಕ ಅಂಕಿ ಅಂಶಗಳ ವರದಿಯಂತೆ ಸಮಾಜದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿರಬೇಕು. ಆದರೆ, ಗಮನಾರ್ಹ ವ್ಯತ್ಯಾಸ ಕಂಡುಬರುತ್ತಿರುವುದನ್ನು ಗಮನಿಸಿದರೆ ಅಕ್ರಮವಾಗಿ ಹೆಣ್ಣು ಭ್ರೂಣಗಳ ಹತ್ಯೆ ನಡೆಯುತ್ತಿರುವ ಸಂಶಯ ಮೂಡುತ್ತದೆ. ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಯಲು ಸಾಕಷ್ಟು ನಿಗಾ ಇರಿಸಲಾಗಿದೆ. ಇದುವರೆಗೂ ಅಂಥ ಯಾವುದೇ ಪ್ರಕರಣವಿಲ್ಲ. ಅಲ್ಲದೆ, ತಾಯಿ ಮತ್ತು ಶಿಶು ಮರಣ ತಪ್ಪಿಸಲು ಕ್ರಮ ವಹಿಸಲಾಗಿದೆ. ಗರ್ಭಿಣಿಯರ ಯೋಗಕ್ಷೇಮ ವಿಚಾರಣೆಗೆ ಕ್ರಮ ವಹಿಸಲಾಗಿದೆ.ಗಂಗೂಬಾಯಿ ಮಾನಕರ್ಜಿಲ್ಲಾಧಿಕಾರಿ, ಉತ್ತರ ಕನ್ನಡ