ಪರಸ್ಪರ ಬಂಧುತ್ವಕ್ಕೆ ಹೊಲಿಗೆ ರಹದಾರಿ: ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅಭಿಮತ

Sewing Training Inauguration Ceremony Mandya
Published on

ಮಂಡ್ಯ: ಹೊಲಿಗೆ ಎಂಬುದು ಕೇವಲ ವೃತ್ತಿಯೋ ಹವ್ಯಾಸವೋ ಅಲ್ಲ. ಬದಲಿಗೆ ಪರಸ್ಪರ ಬಂಧುತ್ವಕ್ಕೆ ರಹದಾರಿ. ಮಾತಾ ಹೃದಯಿಗಳಾಗಿರುವ ಮಹಿಳೆಯರು ಹೊಲಿಗೆ ಕಲಿಯುವುದರಿಂದ ಕೂಡಿ ಬಾಳುವ ಸುಖದ ಅಧಿಕೃತ ರಾಯಭಾರಿಗಳಾಗುತ್ತಾರೆ. ಹೊಲಿಗೆ ಕಲಿತ ವ್ಯಕ್ತಿಯನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ ಎಂದು ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅಭಿಪ್ರಾಯಪಟ್ಟರು

ನಗರದ ಗಾಂಧಿಭವನದಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಮತ್ತು ಕಸ್ತೂರಬಾ ಮಹಿಳೆಯರ ಉಚಿತ ಹೊಲಿಗೆ ತರಬೇತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ 51ನೇ ಹೊಲಿಗೆ ತರಬೇತಿ ಉದ್ಘಾಟನಾ ಸಮಾರಂಭ ಮತ್ತು 50ನೇ ತಂಡದ ಫಲಾನುಭವಿಗಳಿಗೆ ಅರ್ಹತಾ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೊಲಿಗೆ ಎಂದರೆ ಪರಸ್ಪರ ಬಂಧುತ್ವ. ಹೊಲಿಗೆ ಹೊರಗಣ್ಣಿಗೆ ಬಟ್ಟೆ ಹೊಲಿಯುವುದು ಎಂದಿದ್ದರೂ, ಒಳಗಣ್ಣಿಗದು ಕೂಡಿ ಬಾಳುವ ಸಗ್ಗಸುಖವನ್ನು ಕರುಣಿಸುವಂತಾಗುತ್ತದೆ. ಬದುಕಿನ ನೋವು, ಧಣಿವನ್ನು ಮರೆಯಲು ಒಪ್ಪಿಕೊಂಡ ಕೆಲಸದಲ್ಲಿ ತನ್ಮಯರಾದಂತೆ ಆನಂದವನ್ನು ಅನುಭವಿಸಬಹುದು. ಉತ್ಸಾಹವನ್ನು ಹೆಚ್ಚಿಸಿಕೊಳ್ಳಬಹುದು. ಇತರರಿಗೆ ಸ್ಫೂರ್ತಿಯಾಗಬಹುದು. ಕಾರ್ಯೋತ್ಸಾಹದರಿವು ಮೂಡಿಸಬಹುದು. ನಿಮ್ಮ ಕಲಿಕೆ ವ್ಯರ್ಥವಾಗದಿರಲಿ ಎಂದು ಸಲಹೆ ನೀಡಿದರು.

ಗಾಂಧಿಭವನದ ಪ್ರಧಾನ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಹೆಬ್ರಿ ಅವರ ‘ಅಕ್ಷರ ಪುಷ್ಕರ’ ಹಾಗೂ ‘ಭಾವತರಂಗ’ ಕೃತಿಯನ್ನು ಸಾಹಿತಿ ಸಿದ್ದಲಿಂಗಪ್ಪ ಬನ್ನಂಗಾಡಿ ಲೋಕಾರ್ಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net