

ಮಂಡ್ಯ: ಸ್ವಾವಲಂಬನೆ ಜೀವನ ನಡೆಸಲು ಮಹಿಳೆಯರು ಕೌಶಲ ತರಬೇತಿ ಪಡೆದುಕೊಳ್ಳಬೇಕು ಎಂದು ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಸಲಹೆ ನೀಡಿದರು.
ತಾಲೂಕಿನ ಕೆರಗೋಡು ಗ್ರಾಮದಲ್ಲಿ ಸಣ್ಣ, ಮಧ್ಯಮ ಮತ್ತು ಸೂಕ್ಷ್ಮ ಕೈಗಾರಿಕೆಗಳ ನಿಗಮದ ವತಿಯಿಂದ ಎಂಎಸ್‌ಎಂಇ ಅಭಿವೃದ್ಧಿ ಕಚೇರಿ ಮತ್ತು ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಆಯೋಜಿಸಿದ 6 ವಾರಗಳ ಹೊಲಿಗೆ ತರಬೇತಿ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ತರಬೇತಿ ಶಿಬಿರಗಳು ಹಳ್ಳಿಗಳಲ್ಲೇ ಆಯೋಜಿಸುವ ಸಂದರ್ಭದಲ್ಲಿ ಅದನ್ನು ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕಿದೆ. ಪ್ರಸ್ತುತ ದಿನಗಳಲ್ಲಿ ನಗರ ಮತ್ತು ಪಟ್ಟಣಗಳಿಗೆ ಹೋಗಿ ತರಬೇತಿ ಪಡೆಯಲಾಗುತ್ತಿದೆ. ನಮ್ಮ ಸಂಸ್ಥೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಗ್ರಾಮೀಣ ಪ್ರದೇಶಕ್ಕೆ ತಂದು ಅಲ್ಲಿನ ಅಸಂಘಟಿತವಾಗಿರುವ ಮಹಿಳೆಯರಿಗೆ ಕೌಶಲ ಜ್ಞಾನವನ್ನು ಬೆಳೆಸಲು ಮುಂದಾಗಿದೆ. ತರಬೇತಿಯ ಅವಧಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಇಂತಹ ಯೋಜನೆಗಳನ್ನು ಫಲಪ್ರದ ಮಾಡಲು ತಾವು ಸಹಕಾರಿಯಾಗಬೇಕು ಎಂದರು.
ಕೆರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್‌ಕುಮಾರ್ ಮಾತನಾಡಿ, ಮಹಿಳೆಯರಲ್ಲಿ ಜ್ಞಾನದ ಅರಿವು ಹೆಚ್ಚಾಗಬೇಕಾಗಿದೆ. ಸಾಮಾಜಿಕ ಜಾಲತಾಣ ಅದರಲ್ಲೂ ಮೊಬೈಲ್‌ಗಳಿಂದ ಮಹಿಳೆಯರು ಮತ್ತು ಮಕ್ಕಳು ತುಂಬ ಕೆಟ್ಟ ಆಲೋಚನೆಗಳನ್ನು ಹೊಂದುವ ಸ್ಥಿತಿಗೆ ಬಂದಿದೆ. ಸೈಬರ್ ಠಾಣೆಗಳಲ್ಲಿ ಈಗಾಗಲೇ ಹೆಚ್ಚು ದೂರುಗಳು ದಾಖಲಾಗಿದ್ದು, ಅದರಲ್ಲಿ ಮಹಿಳೆಯರು ಮತ್ತು ಮಕ್ಕಳ ದೂರುಗಳೇ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಉಪ ಕಸುಬುಗಳಾದ ಕಸೂತಿ, ಎಂಬ್ರಾಯ್ಡರಿ ಮತ್ತು ಉಪಉತ್ಪನ್ನಗಳ ತಯಾರಿಕೆಯನ್ನು ಕಲಿತುಕೊಳ್ಳಬೇಕೆಂದು ಸಲಹೆ ನೀಡಿದರು.
ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಕಾರ್ಯದರ್ಶಿ ಕೆ.ಪಿ.ಅರುಣಕುಮಾರಿ ಮಾತನಾಡಿ, ಮಹಿಳೆಯರಲ್ಲಿ ಸ್ವಸಹಾಯ ಸಂಘಗಳ ಬಲವರ್ಧನೆ ಕಾರ್ಯ ಹೇಗೆ ಸಾಗುತ್ತದೋ ಹಾಗೆಯೇ ಕೌಶಲಾಭಿವೃದ್ಧಿ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದುವುದು ಅವಶ್ಯಕ. ಕೌಶಲ ಸಾಕ್ಷರತಾ ಆಂದೋಲನವನ್ನು ಈ ಕಾರ್ಯಕ್ರಮಗಳ ಮೂಲಕ ಹಮ್ಮಿಕೊಳ್ಳಲು ನಮ್ಮ ಸಂಸ್ಥೆ ಮುಂದಾಗಿದೆ ಎಂದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಗೋವಿಂದರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತರಬೇತುದಾರರಾದ ಎಂ.ಪಿ. ಅನ್ನಪೂರ್ಣ, ಜ್ಯೋತಿ ಹಾಜರಿದ್ದರು.