

ವಿಜಯವಾಣಿ ಸುದ್ದಿಜಾಲ ಉಡುಪಿ
ಆರ್ಥಿಕವಾಗಿ ಹಿಂದುಳಿದವರಿಗೆ ಸ್ವಾವಲಂಬಿ ಬದುಕು ಸಾಗಿಸಲು ಸರ್ಕಾರ ಸೂಕ್ತ ಪ್ರೋತ್ಸಾಹ ನೀಡುತ್ತದೆ. ಆ ನಿಟ್ಟಿನಲ್ಲಿ ಉಡುಪಿ ನಗರಸಭೆಯ ವತಿಯಿಂದ ಅರ್ಹರಿಗೆ ಹೊಲಿಗೆ ವೃತ್ತಿಯ ಮೂಲಕ ಸ್ವಾವಲಂಬಿ ಬದುಕು ರೂಪಿಸಲು ಸಹಕಾರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಸಹ ಸ್ವಯಂ ಉದ್ಯೋಗ ನಡೆಸಲು ಮುಂದೆ ಬರುವವರಿಗೆ ನಗರಸಭೆಯಿಂದ ಸಹಕಾರ ಒದಗಿಸಲು ವಿಶೇಷ ಆದ್ಯತೆ ವಹಿಸುವುದಾಗಿ ಶಾಸಕ ಯಶ್ಪಾಲ್ ಸುವರ್ಣ ಭರವಸೆ ನೀಡಿದರು.
ಉಡುಪಿ ನಗರಸಭೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಾಗೂ ಬಡಜನರ ಕಲ್ಯಾಣ ಕಾರ್ಯಕ್ರಮದ ಶೇ. 7.25 ಅನುದಾನ ಯೋಜನೆಯಡಿ 76 ಮಂದಿ ಫಲಾನುಭವಿಗಳಿಗೆ ಮಂಜೂರಾದ ಹೊಲಿಗೆ ಯಂತ್ರವನ್ನು ನಗರಸಭೆಯ ಸಭಾಂಗಣದಲ್ಲಿ ಜುಲೈ 12ರಂದು ಬೆಳಗ್ಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡಿದರು.
ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ನಗರಸಭಾ ಸದಸ್ಯರು, ಅಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.