

ಕಿನ್ನಿಗೋಳಿ: ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಕಿನ್ನಿಗೋಳಿ ಶಾಖೆಯ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಅಶಕ್ತ ನಿರುದ್ಯೋಗಿ ಯುವತಿಯರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಸಂಘದ ಸಭಾಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ಇನ್ನರ್ವೀಲ್ ನಿಯೋಜಿತ ಅಧ್ಯಕ್ಷೆ ರೇಖಾ ರಘುರಾಮ್ ಶೆಟ್ಟಿ ಮಾತನಾಡಿ, ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅತ್ಯಲ್ಪ ಕಾಲದಲ್ಲಿ ಬಹಳಷ್ಟು ಜನಪ್ರಿಯತೆ ಕಂಡಿದೆ. ಕೇವಲ ಹಣಕಾಸು ವ್ಯವಹಾರಕ್ಕೆ ಸೀಮಿತವಾಗದೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವುದು ಅಭಿನಂದನೀಯ ಎಂದರು.
ಸಂಘದ ಅಧ್ಯಕ್ಷ ವಸಂತ್ ಬರ್ನಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೊಸೈಟಿ ಕಳೆದ ವರ್ಷ 30 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, 26 ಕೋಟಿ ರೂ. ಸಾಲ ವಿತರಣೆ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಯತ್ತ ಸಾಗಲು ಗ್ರಾಹಕರ ಸಹಕಾರವಿರಲಿ ಎಂದರು.
ಕಿನ್ನಿಗೋಳಿ ವನಿತಾ ಸಮಾಜದ ಅಧ್ಯಕ್ಷೆ ನಿರ್ಮಲಾ ವಿ.ನಾಯಕ್, ಸೊಸೈಟಿ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕ ಉಮಾನಾಥ ಜೆ.ಶೆಟ್ಟಿಗಾರ್, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಶಾಖಾ ಪ್ರಬಂಧಕ ಮೋಹನ್ದಾಸ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು. ಮೋಹನ್ದಾಸ್ ಸ್ವಾಗತಿಸಿದರು. ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ವಂದಿಸಿದರು. ಸಿಬ್ಬಂದಿ ಕ್ಯಾರೊಲ್ ಡಿಸೋಜ ನಿರೂಪಿಸಿದರು. ಅಶಕ್ತ ನಿರುದ್ಯೋಗಿ ಯುವತಿಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.