ಚರಂಡಿ ಸಮಸ್ಯೆ ಪರಿಹರಿಸಿದ ಅಧಿಕಾರಿಗಳ ತಂಡ

dvd parapura problm
ದೇವದುರ್ಗ ತಾಲೂಕು ಪರಾಪುರ ಗ್ರಾಮಕ್ಕೆ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಚರಂಡಿ ನಿರ್ಮಾಣ ಕಾಮಗಾರಿ ಸಮಸ್ಯೆ ಪರಿಹರಿಸಿತು. ತಾಪಂ ಇಒ ಬಸವರಾಜ ಹಟ್ಟಿ, ಗ್ರಾಪಂ ಅಧ್ಯಕ್ಷ ಭೀಮಣ್ಣ ಬಿರಾದಾರ್, ಪಿಡಿಒ ವೆಂಕಟೇಶ, ಪಿಎಸ್‌ಐ ವೈಶಾಲಿ ಝಳಕಿ, ಕಂದಾಯ ನಿರೀಕ್ಷಕ ದೇವರೆಡ್ಡಿ ಇತರರಿದ್ದರು.
Published on

ದೇವದುರ್ಗ: ತಾಲೂಕಿನ ಅಮರಾಪುರ ಗ್ರಾಪಂ ವ್ಯಾಪ್ತಿಯ ಪರಾಪುರ ಗ್ರಾಮದ ಮುಖ್ಯರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಾಣಕ್ಕೆ ಕೆಲವರು ಅಡ್ಡಿಪಡಿಸಿದ ಕಾರಣ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ನೇತೃತ್ವದ ತಂಡ ಶನಿವಾರ ಭೇಟಿ ನೀಡಿ ಸಮಸ್ಯೆ ಪರಿಹರಿಸಿತು.

ಗ್ರಾಮದಲ್ಲಿ ಕೆಲವರ ಮನೆಯ ಅಂಗಳದಲ್ಲೇ ಮಳೆ ಹಾಗೂ ಚರಂಡಿ ನೀರು ಸಂಗ್ರಹವಾಗಿ ವಾತಾವರಣ ಹದಗೆಡಿಸಿತ್ತು. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಚರಂಡಿ ನಿರ್ಮಾಣ ಕಾಮಗಾರಿಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರಿಂದ ಗೊಂದಲ ಉಂಟಾಗಿತ್ತು.

ಸಮಸ್ಯೆ ಗಂಭೀರತೆ ಅರಿತ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹಾಗೂ ತಾಪಂ ಇಒ ಬಸವರಾಜ ಹಟ್ಟಿ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಸಂಧಾನ ಸಭೆ ನಡೆಸಿದರು. ಸಮಸ್ಯೆ ಸ್ಥಳದಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ತಿಪ್ಪರಾಜು ಮುಖ್ಯ ರಸ್ತೆಯ ಅಕ್ಕಪಕ್ಕದ ಖಾಲಿ ನಿವೇಶದ ಅಳತೆ ಮಾಡಿಸಿ ಪಕ್ಕದಲ್ಲೇ ತಾತ್ಕಾಲಿಕ ಚರಂಡಿ ನಿರ್ಮಾಣ ಮಾಡಿಸಿ ಸಮಸ್ಯೆ ಪರಿಹಾರ ಕಲ್ಪಿಸಿದರು.

ಈಗಾಗಲೇ ಗ್ರಾಪಂಯಿಂದ ನರೇಗಾ ಯೋಜನೆಯಡಿ ಮೂರು ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಮಾಡಿ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಕಾಮಗಾರಿ ಆರಂಭಿಸುವ ಹಂತದಲ್ಲಿ ಕೆಲವರು ತಕಾರರು ತೆಗೆದಿದ್ದರು. ಕೆಲವರು ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೆಮ್ಮದಿಯ ಬದುಕು ಸಾಗಿಸಲು ಎಲ್ಲರೂ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ರಸ್ತೆ, ಚರಂಡಿಗಳನ್ನು ಯಾವುದೇ ಕಾರಣಕ್ಕೂ ಒತ್ತುವರಿ ಮಾಡಿಕೊಳ್ಳದೆ ಅದರ ಪಾಡಿಗೆ ಬಿಡಬೇಕು ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಗ್ರಾಮಸ್ಥರಿಗೆ ತಿಳಿವಳಿಕೆ ನೀಡಿದರು.

ತಾಪಂ ಇಒ ಬಸವರಾಜ ಹಟ್ಟಿ, ಗ್ರಾಪಂ ಅಧ್ಯಕ್ಷ ಭೀಮಣ್ಣ ಬಿರಾದಾರ್, ಪಿಡಿಒ ವೆಂಕಟೇಶ, ಉಪತಹಸೀಲ್ದಾರ್ ಗೋವಿಂದ ನಾಯಕ, ಪಿಎಸ್‌ಐ ವೈಶಾಲಿ ಝಳಕಿ, ಕಂದಾಯ ನಿರೀಕ್ಷಕ ದೇವರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net