ಮಳೆಗೆ ಸಜ್ಜಾಗಿದೆ ದುರ್ಗ ನಗರಸಭೆ

dj ctd nagarasabe
Published on

ಧನಂಜಯ ಎಸ್. ಹಕಾರಿ ಚಿತ್ರದುರ್ಗ: ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ವರುಣನ ಅಬ್ಬರ ಆರಂಭವಾಗಿದೆ. ರಣ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮಳೆ ತಂಪೆರೆದಿದೆ. ಕೆಲವೆಡೆ ಮಳೆಯೊಂದಿಗೆ ಜೋರಾದ ಗಾಳಿಯಿಂದ ರೈತರು ಬೆಳೆ ನಷ್ಟಕ್ಕೀಡಾಗಿ ಪರಿತಪಿಸುವಂತಾಗಿದೆ.

ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯೊಂದಿಗೆ ಅದನ್ನು ಎದುರಿಸಲು ಚಿತ್ರದುರ್ಗ ನಗರಸಭೆ ಸಜ್ಜಾಗಿದೆ. ಚರಂಡಿ, ರಾಜಕಾಲುವೆ ಸ್ವಚ್ಛತೆ ಕಾರ್ಯಕ್ಕೆ ಮುಂದಾಗಿದೆ. ಮಳೆ ನೀರು ಎಲ್ಲಿಯೂ ನಿಲ್ಲದಂತೆ ಹರಿಯಲು ಸೂಕ್ತ ಕ್ರಮವಹಿಸುತ್ತಿದೆ.

ನಗರದಲ್ಲಿ 35 ವಾರ್ಡ್‌ಗಳಿದ್ದು, ಹಂತ-ಹಂತವಾಗಿ ಎಲ್ಲವನ್ನೂ ಸ್ವಚ್ಛಗೊಳಿಸಲು ಕ್ರಮವಹಿಸಲಾಗಿದೆ. ಮಳೆಯ ನೀರು ಚರಂಡಿ, ರಾಜಕಾಲುವೆಗಳಲ್ಲಿ ಸರಾಗವಾಗಿ ಹರಿಯಬೇಕು. ಅದಕ್ಕಾಗಿ ರಾಜಕಾಲುವೆಗಳನ್ನು ಜೆಸಿಬಿ, ಹಿಟಾಚಿ ಯಂತ್ರಗಳನ್ನು ಬಳಸಿಕೊಂಡು ದೊಡ್ಡ ಮಟ್ಟದಲ್ಲಿ ಹೂಳೆತ್ತುವ ಕಾರ್ಯ ನಡೆದಿದೆ.

ಕಳೆದ ಮೂರು ದಿನಗಳಿಂದ ಪೌರ ಕಾರ್ಮಿಕರು ಕಿರಿದಾದ ಚರಂಡಿಗಳಲ್ಲಿ ಸ್ವಚ್ಛತೆ ಕಾರ್ಯ ಆರಂಭಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಇರುವ ಕಾರಣ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳುವಂತಿಲ್ಲ.

ಆದರೆ, ಮಳೆಯಿಂದ ಅವಾಂತರ ಸೃಷ್ಟಿಯಾಗುವುದನ್ನು ತಪ್ಪಿಸಲು ಸ್ವಚ್ಛತಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅಪಾಯಕಾರಿ ಎನಿಸುವ ಕಾಲುವೆಗಳು ಇದರಲ್ಲಿ ಸೇರಿವೆ ಎಂದು ಪರಿಸರ ಇಂಜಿನಿಯರ್ ಜಾಫರ್ ವಿಜಯವಾಣಿಗೆ ಮಾಹಿತಿ ನೀಡಿದರು.

ನಗರದಲ್ಲಿವೆ 2 ರಾಜಕಾಲುವೆ: ಚಿತ್ರದುರ್ಗ ನಗರದಲ್ಲಿ 2 ದೊಡ್ಡ ರಾಜ ಕಾಲುವೆಗಳಿವೆ. ಬಹುತೇಕ ಪ್ರದೇಶಗಳನ್ನು ಈ ಕಾಲುವೆಗಳು ಸುತ್ತುವರಿದಿವೆ. ಚಂದ್ರವಳ್ಳಿ, ನೆಹರು ನಗರ, ದಾವಣಗೆರೆ ರಸ್ತೆ, ಮೆದೇಹಳ್ಳಿ ರಸ್ತೆ, ಮಾರುತಿನಗರ ಸರ್ವೀಸ್ ರಸ್ತೆ ಬ್ರಿಡ್ಜ್‌ನಿಂದ ಮಲ್ಲಾಪುರ ಕೆರೆಯಲ್ಲಿ ಕೊನೆಯಾಗಲಿದೆ. ಮತ್ತೊಂದು ಕಾಲುವೆ ಮುನ್ಸಿಪಲ್ ಕಾಲನಿಯಿಂದ ಆರಂಭವಾಗಿ ಹತ್ತಿರದ ಪ್ರದೇಶಗಳನ್ನು ಸ್ತುತುವರಿದಿದೆ.

ಸಾರ್ವಜನಿಕರು ಕೈ ಜೋಡಿಸಲಿ: ನಗರದ ಸ್ವಚ್ಛತೆಗೆ ನಗರಸಭೆ ಜತೆಯಲ್ಲಿ ಸಾರ್ವಜನಿಕರು ಕೈ ಜೋಡಿಸಬೇಕಿದೆ. ಎಲ್ಲೆಂದರಲ್ಲಿ ಕಸ ಹಾಕುವುದನ್ನು ನಿಲ್ಲಿಸಿ, ಮನೆಯ ಬಾಗಿಲಿಗೆ ಬರುವ ಕಸದ ವಾಹನಕ್ಕೆ ಬೇರ್ಪಡಿಸಿದ ಹಸಿ ಹಾಗೂ ಒಣ ಕಸ ನೀಡಬೇಕು. ರಾತ್ರಿ ಯಾರೂ ನೋಡುವುದಿಲ್ಲ ಎಂದು ಬಯಲಿನಲ್ಲಿ ಕಸ ಬಿಸಾಕುವುದರಿಂದ ಪರಿಸರ ನಾಶವಾಗಲಿದೆ ಎನ್ನುವುದರ ಅರಿವು ಜನರಿಗೆ ಇರಬೇಕು ಎನ್ನುತ್ತಾರೆ ಪೌರಾಯುಕ್ತೆ ಎಂ. ರೇಣುಕಾ.

ರಾಜ್ಯದಲ್ಲಿ ಈ ವರ್ಷ ಉತ್ತಮ ಮಳೆ ನಿರೀಕ್ಷೆಯಿದೆ. ಹೀಗಾಗಿ ನಗರದ ಸ್ವಚ್ಛತಾ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಚರಂಡಿ, ರಾಜಕಾಲುವೆಗಳಲ್ಲಿ ಮಳೆ ನೀರು ನಿಂತು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಎಂ.ರೇಣುಕಾ, ಪೌರಾಯುಕ್ತೆಚಿತ್ರದುರ್ಗ ನಗರದ ಪ್ರಮುಖ ಚರಂಡಿ, ಕಾಲುವೆಗಳ ಸ್ವಚ್ಛ ಕಾರ್ಯ ನಡೆಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಬಹುತೇಕ ಪೂರ್ಣಗೊಳ್ಳಲಿದೆ. ಇದರೊಂದಿಗೆ ಮಳೆ ಸ್ವಾಗತಕ್ಕೆ ನಗರಸಭೆ ಕೂಡ ಸನ್ನದ್ಧವಾಗಿದೆ.ಜಾಫರ್, ನಗರಸಭೆ ಪರಿಸರ ಇಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net