

ಚನ್ನಗಿರಿ: ದೇಶದ 2ನೇ ಅತಿ ದೊಡ್ಡ ಕೆರೆಯಾದ ಸೂಳೆಕೆರೆಯಿಂದ ಚನ್ನಗಿರಿ ಪಟ್ಟಣಕ್ಕೆ ಪೂರೈಕೆಯಾಗುವ ನೀರು ತಾತ್ಕಾಲಿಕವಾಗಿ ಕುಡಿಯಲು ಯೋಗ್ಯವಿಲ್ಲವೆಂದು ವೈದ್ಯಾಧಿಕಾರಿಗಳು ದೃಢಪಡಿಸಿದ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಶುಕ್ರವಾರದಿಂದ 45 ದಿನಗಳ ಕಾಲ ನೀರು ಸರಬರಾಜು ನಿಲ್ಲಿಸಿ, ಪುರಸಭೆ ಆದೇಶ ಹೊರಡಿಸಿದೆ.
ಪರ್ಯಾಯವಾಗಿ ಕುಡಿಯಲು ಹಿರೇಮಳಲಿ ನೀರನ್ನು ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆ.
ಚಿತ್ರದುರ್ಗ ಕವಾಡಿಗರ ಹಟ್ಟಿ ಘಟನೆ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿಗಳು ಶಾಂತಿಸಾಗರ ಕೆರೆ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ನೀರು ಕಲುಷಿತಗೊಂಡಿರುವುದು ಬೆಳಕಿದೆ ಬಂದಿದೆ.
ಕಳೆದ ಎರಡು ತಿಂಗಳಿಂದ ನಲ್ಲಿಯಲ್ಲಿ ಬಿಡಲಾಗುತ್ತಿದ್ದ ನೀರು ಸರಿಯಿಲ್ಲ ಎಂದು ಸ್ಥಳೀಯರು ಅನೇಕ ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಜತೆಗೆ, ಶಾಸಕರ ಗಮನಕ್ಕೂ ತರಲಾಗಿತ್ತು.
ಇತ್ತೀಚೆಗೆ ಶಾಸಕರು ಸೂಳೆಕೆರೆಗೆ ಭೇಟಿ ನೀಡಿ ಪರಿಶೀಲಿಸಿ, ನೀರನ್ನು ಶುದ್ಧೀಕರಿಸಿ ಬಿಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ, ಚಿತ್ರದುರ್ಗದಲ್ಲಿ ನಡೆದ ಘಟನೆಯಿಂದ ಬೆದರಿದ ಅಧಿಕಾರಿಗಳು ಪಟ್ಟಣಕ್ಕೆ ಸರಬರಾಜಾಗುವ ನೀರು ಬಂದ್ ಮಾಡಿಸಿದ್ದಾರೆ.ನೀರು ಕುಡಿಯಲು ಬಳಸದಂತೆ ಪುರಸಭೆ ವಾಹನದ ಮೂಲಕ ಪ್ರಚಾರ ಮಾಡಲಾಗುತ್ತಿದೆ.
ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು 14 ಶುದ್ಧ ನೀರಿನ ಘಟಕ ವಿವಿಧ ವಾರ್ಡುಗಳಲ್ಲಿ ಸ್ಥಾಪಿಸಿದೆ. ಆದರೆ, ಅದರಲ್ಲಿ ಮೂರು ಘಟಕಗಳು ಮಾತ್ರ ಕೆಲಸ ಮಾಡುತ್ತಿವೆ. ಪಟ್ಟಣದಲ್ಲಿ 23 ವಾರ್ಡ್‌ಗಳಿದ್ದು, ಸುಮಾರು 25 ಸಾವಿರ ಜನಸಂಖ್ಯೆ ಇರುವಾಗ ಟ್ಯಾಂಕರ್ ಮೂಲಕ ಎಲ್ಲರಿಗೂ ನೀರು ಒದಗಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಪಟ್ಟಣಕ್ಕೆ ಕಲುಷಿತ ನೀರು ಬರುತ್ತಿರುವ ದೂರುಗಳು ಬಂದ ಕಾರಣದಿಂದ ಪುರಸಭೆ 28 ಲಕ್ಷ ರೂ. ಅನುದಾನದಲ್ಲಿ ಸೂಳೆಕೆರೆಯ ನೀರು ಸರಬರಾಜು ಕೇಂದ್ರದಲ್ಲಿ ಶುದ್ಧೀಕರಿಸುವ ಯಂತ್ರ ಅಳವಡಿಸಲು ಮತ್ತು ರಿಪೇರಿ ಮಾಡಲು ಟೆಂಡರ್ ಕರೆಯಲಾಗಿದೆ. ಕೆಲಸ ಮುಗಿಯಲು 45 ದಿನ ಬೇಕು. ಹಾಗಾಗಿ, ಜನರಿಗೆ ನೀರಿನ ಸಮಸ್ಯೆ ನೀಗಿಸಲು 4 ಟ್ಯಾಂಕ್ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತದೆ.
-ಕೆ. ಪರಮೇಶ್, ಪುರಸಭೆ ಮುಖ್ಯಾಧಿಕಾರಿ.
ನಲ್ಲಿಯಲ್ಲಿ ಬರುವ ನೀರು ಕುಡಿಯಲು ಆಗುತ್ತಿಲ್ಲ. ಹಾಗಾಗಿ, ನಲ್ಲಿ ನೀರನ್ನು ಮನೆ ಬಳಕೆ ಮಾತ್ರ ಉಪಯೋಗಿಸಿ, ಕುಡಿಯಲು 20 ಲೀಟರ್‌ಗೆ 15 ರೂ. ನಂತೆ ಕೊಟ್ಟು ಖರೀದಿಸಿ ಬಳಸುತ್ತಿದ್ದೇವೆ. ಪುರಸಭೆ ಅಧಿಕಾರಿಗಳು ಶುದ್ಧ ನೀರು ಪೂರೈಸುವಲ್ಲಿ ವಿಫಲರಾಗಿದ್ದಾರೆ.
-ಮಂಜುನಾಥ್ , ಚನ್ನಗಿರಿ ಪಟ್ಟಣ ನಿವಾಸಿ.
ಸೂಳೆಕೆರೆ ನೀರು ಪೈಪ್ ಮೂಲಕ ಚನ್ನಗಿರಿ ಪಟ್ಟಣಕ್ಕೆ ಬರುವಾಗ ಮಣ್ಣು ಮಿಶ್ರಿತವಾಗಿ ಕಲುಷಿತಗೊಂಡಿದೆ. ಪರೀಕ್ಷೆ ಮಾಡಿಸಿದಾಗ ಬಂದ ವರದಿಯಂತೆ ಜನರು ಕುಡಿಯಲು ಯೋಗ್ಯವಾಗಿಲ್ಲ. ಹಾಗಾಗಿ, ಸಾರ್ವಜನಿಕರು ಕೆಲ ದಿನ ಟ್ಯಾಂಕರ್ ನೀರನ್ನು ಕುಡಿಯಲು ಬಳಸಿಕೊಳ್ಳಬೇಕು.
-ಡಾ.ಶಿವಕುಮಾರ್, ತಾಲೂಕು ವೈದ್ಯಾಧಿಕಾರಿ.