ಅನ್ಸಾರ್ ಇನೋಳಿ ಉಳ್ಳಾಲ
ಸ್ವಚ್ಛ ಸಂಕೀರ್ಣ ಬಹುತೇಕ ಗ್ರಾಮಗಳಲ್ಲಿ ಕಾರ್ಯಾಚರಿಸುತ್ತಿವೆ. ಆದರೆ ಅತ್ಯಧಿಕ ಆದಾಯ ಇರುವ ನಗರಸಭೆಗಳಿಂದಲೂ ಸಾಧ್ಯವಾಗದ ಮಲತ್ಯಾಜ್ಯ ಘಟಕ ಪುಟ್ಟದಾದ ಗ್ರಾಮ ನರಿಂಗಾನದಲ್ಲಿ ನಿರ್ಮಾಣಗೊಳ್ಳುತ್ತಿದೆ. ಗ್ರಾಮದ ಅಭಿವೃದ್ಧಿಗೆ ಪೂರಕ ಆಗಬಲ್ಲ ಆಡಳಿತ ವರ್ಗದ ದೂರದೃಷ್ಟಿಯ ಯೋಜನೆ ಯಶಸ್ವಿಯಾದರೆ ನರಿಂಗಾನ ಗ್ರಾಮ ರಾಜ್ಯಕ್ಕೆ ಮಾದರಿಯಾಗಲಿದೆ.
ನರಿಂಗಾನ ಗ್ರಾಮದಲ್ಲಿ 1600 ಮನೆಗಳು ಇದ್ದು ಯೇನೆಪೊಯ ಆಯುರ್ವೇದ ಕಾಲೇಜು ಹೊರತುಪಡಿಸಿದರೆ ಇತರ ದೊಡ್ಡ ಮಟ್ಟದ ಉದ್ಯಮಗಳು ಇಲ್ಲ. ಇನ್ನುಳಿದಂತೆ ಮನೆಗಳು, ಅಂಗಡಿ ಕಟ್ಟಡಗಳು ಮಾತ್ರ ಆದಾಯಕ್ಕೆ ಮೂಲ. ಆದರೂ ಇಲ್ಲಿ ಕೋಟ್ಯಂತರ ರೂ.ಗಳ ದೂರದೃಷ್ಟಿಯ ಯೋಜನೆಗಳಿಗೆ ಗ್ರಾಮ ಪಂಚಾಯಿತಿ ಆಡಳಿತಗಾರರು ಕೈಹಾಕಿದ್ದು ಅಧಿಕಾರಿ ವರ್ಗವೂ ಅಷ್ಟೇ ಮುತುವರ್ಜಿಯಿಂದ ಕೈಜೋಡಿಸಿದೆ.
ಗೋಮಾಳ ಜಮೀನು ಬಳಕೆ: ಗ್ರಾಮದ ನೆತ್ತಿಲಪದವಿನಲ್ಲಿರುವ ಸರ್ಕಾರಿ ಹಾಗೂ ಗೋಮಾಳ ಜಮೀನು ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಇಲ್ಲಿ ಸುಮಾರು ನೂರು ಎಕರೆಯಷ್ಟು ಸರ್ಕಾರಿ ಜಮೀನು ಇದ್ದು ಹಿಂದೊಮ್ಮೆ ಖಾಲಿ ಬಿದ್ದಿದ್ದ ಯಾರದ್ದೋ ಪಾಲಾಗುವ ಅಪಾಯ ಎದುರಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಪಂಚಾಯಿತಿ ಆಡಳಿತ ಮತ್ತು ಅಧಿಕಾರಿಗಳು ಇಲ್ಲಿ ಹಲವು ಯೋಜನೆಗಳನ್ನು ರೂಪಿಸಿದ್ದಾರೆ.
ಈಗಾಗಲೇ ಸರ್ಕಾರಿ ಕಂಬಳ ಕರೆಯೂ ನಿರ್ಮಾಣಗೊಂಡಿದ್ದು ಮೂರು ವರ್ಷ ಕಂಬಳ ನಡೆದು ನಾಲ್ಕನೇ ವರ್ಷದ ಕಂಬಳಕ್ಕೆ ಸಮಿತಿ ಸಿದ್ಧತೆಯಲ್ಲಿದೆ. ಇಲ್ಲೇ ತುಳು ಗ್ರಾಮ ನಿರ್ಮಾಣ ಕನಸು ಸ್ಪೀಕರ್ ಯು.ಟಿ.ಖಾದರ್ ಅವರದ್ದು. ಸನಿಹದಲ್ಲೇ ಸ್ವಚ್ಛ ಸಂಕೀರ್ಣ ಹಾಗೂ ಮಲತ್ಯಾಜ್ಯ ಘಟಕ ಕಾಮಗಾರಿ ಪ್ರಗತಿಯಲ್ಲಿದೆ.
ಈಗಾಗಲೇ ಗ್ರಾಮದಲ್ಲಿ ಕಸ ಸಂಗ್ರಹ ನಡೆಯುತ್ತಿದ್ದು ನಿರ್ವಹಣೆ ನಿಟ್ಟಿನಲ್ಲಿ ಎರಡು ಎಕರೆ ಜಮೀನಿನಲ್ಲಿ ಸ್ವಚ್ಛ ಸಂಕೀರ್ಣ ಮತ್ತು ಮಲತ್ಯಾಜ್ಯ ಘಟಕ ಕಾಮಗಾರಿ ನಡೆಯುತ್ತಿದೆ. ಇನ್ನೂ ಮೂರು ಎಕರೆ ಜಮೀನು ಹೆಚ್ಚುವರಿಯಾಗಿ ನೀಡುವಂತೆ ಕಂದಾಯ ಇಲಾಖೆಗೆ ಗ್ರಾ.ಪಂ. ಮನವಿ ಮಾಡಿದೆ. ಇದುವರೆಗೆ ಮಲತ್ಯಾಜ್ಯ ಘಟಕ ಯಾವುದೇ ಗ್ರಾಮ ಮಾತ್ರವಲ್ಲ ಉಳ್ಳಾಲ ನಗರಸಭೆಯಲ್ಲೂ ಕಾರ್ಯರೂಪಕ್ಕೆ ಬಂದಿಲ್ಲ.
ಉಳ್ಳಾಲ ನಗರಸಭೆಯ ಯೋಜನೆ ಹಲವಾರು ವರ್ಷಗಳಿಂದ ಪೂರ್ಣಗೊಂಡಿಲ್ಲ. ಹೀಗಿರುವಾಗ ಯಾವುದೇ ಗ್ರಾ.ಪಂ.ಗಳು ಇಂಥ ಯೋಜನೆಯ ಬಗ್ಗೆ ಕನಸಿನಲ್ಲೂ ಯೋಚಿಸಿಲ್ಲ. ಆದರೂ ನರಿಂಗಾನ ಗ್ರಾಮದಲ್ಲಿ ದೂರದೃಷ್ಟಿಯ ಯೋಜನೆ ರೂಪಿಸಿ ಕಾಮಗಾರಿ ನಡೆಸಲಾಗುತ್ತಿದೆ. ಘಟಕಗಳ ಪರಿಸರದಲ್ಲಿ ಈಗಾಗಲೇ ತೆಂಗಿನ ಗಿಡಗಳು ಹಾಗೂ ಅರಣ್ಯ ಇಲಾಖೆಯ ಗಿಡಗಳನ್ನು ನೆಡಲಾಗಿದ್ದು ಹಸಿರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಮಲತ್ಯಾಜ್ಯ ಘಟಕ ಕಾರ್ಯಗತಗೊಂಡರೆ ನೀರು ಶುದ್ಧೀಕರಿಸಿ ಸಸಿಗಳಿಗೆ ಬಿಡುವ ಯೋಜನೆ ಇದೆ.
ಆಶಾ ಕಾರ್ಯಕರ್ತೆಯರ ಸ್ಕೂಟರ್ ಕನಸಿಗೆ ಗರಿ!
ಗ್ರಾಮದ ಸ್ವಚ್ಛತೆ ಮತ್ತು ಗ್ರಾಮಸ್ಥರ ಆರೋಗ್ಯದ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರ ಶ್ರಮ ಅಲ್ಲಗಳೆಯುವಂತಿಲ್ಲ. ಸ್ವಚ್ಛತೆ ಬಗ್ಗೆ ಘೋಷಣಾ ಪತ್ರ ನೀಡುವ ವಿಚಾರದಲ್ಲೂ ಇವರ ಪ್ರೇರಣೆ ಪಂಚಾಯಿತಿಗೆ ವರವಾಗಿದೆ. ಈ ನಿಟ್ಟಿನಲ್ಲಿ ಓಡಾಟಕ್ಕೆ ಅನುಕೂಲ ಕಲ್ಪಿಸಲು ಮುಂದಾಗಿರುವ ಆಡಳಿತಗಾರರು ಏಳು ಆಶಾ ಕಾರ್ಯಕರ್ತೆಯರಿಗೂ ಸ್ಕೂಟರ್ ನೀಡಲು ಮುಂದಾಗಿದ್ದು ಎರಡು ತಿಂಗಳೊಳಗೆ ಯೋಜನೆ ಕಾರ್ಯಗತಗೊಳ್ಳುವ ನಿರೀಕ್ಷೆ ಇದೆ.
ಸೌಹಾರ್ದದ ಪ್ರತೀಕ ಗಾಂಧಿ ಪ್ರತಿಮೆ!
ನರಿಂಗಾನ ಗ್ರಾಮ ಸೌಹಾರ್ದದ ಪ್ರತೀಕ. ಯಾವುದೇ ಕಾರ್ಯಕ್ರಮವಾದರೂ ಎಲ್ಲ ಧರ್ಮೀಯರು ಜತೆಯಾಗಿ ಆಚರಿಸುವುದು ಇಲ್ಲಿನ ವಾಡಿಕೆ. ಇತ್ತೀಚೆಗೆ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮ ಸೌಹಾರ್ದಕ್ಕೊಂದು ಜ್ವಲಂತ ನಿದರ್ಶನ. ಈ ಗ್ರಾಮದ ಸೌಹಾರ್ದ ಚಿರಾಯುಗೊಳಿಸುವ ನಿಟ್ಟಿನಲ್ಲಿ ಜನಶಿಕ್ಷಣ ಟ್ರಸ್ಟ್ ಪ್ರೇರಣೆ ಮೇರೆಗೆ ಪಂಚಾಯಿತಿ ಅಂಗಳದಲ್ಲಿ ಗಾಂಧಿ ಪ್ರತಿಮೆ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ.
ಪ್ರಸ್ತುತ ದಿನಗಳಲ್ಲಿ ಗ್ರಾಮಕ್ಕೆ ಮಲತ್ಯಾಜ್ಯ ಘಟಕದ ಅವಶ್ಯಕತೆ ಇಲ್ಲ. ಗ್ರಾಮದ ಅಭಿವೃದ್ಧಿ ನಿಟ್ಟಿನಲ್ಲಿ ಈ ಯೋಜನೆ ಮುಂದಕ್ಕೆ ಸಹಕಾರಿ. ಘಟಕದ ತ್ಯಾಜ್ಯ ನೀರು ಶುದ್ಧೀಕರಿಸಿ ಗಿಡಗಳಿಗೆ ಬಳಸಲಾಗುತ್ತದೆ. ಆಶಾ ಕಾರ್ಯಕರ್ತೆಯರಿಗೆ ಸ್ಕೂಟರ್ ವಿತರಣೆ ಹಾಗೂ ಗ್ರಾ.ಪಂ. ಅಂಗಳದಲ್ಲಿ ಗಾಂಧಿ ಪ್ರತಿಮೆ ಶೀಘ್ರ ನಿರ್ಮಿಸಲಾಗುವುದು. ಎಂ.ಬಿ.ನವಾಝ್ ಕಲ್ಲರಕೋಡಿ, ಗ್ರಾ.ಪಂ. ಅಧ್ಯಕ್ಷ ಮನೆಗಳಿಂದ ತ್ಯಾಜ್ಯ ಸಂಗ್ರಹ ಮಾಡುತ್ತಿರುವುದರಿಂದ ನಿರ್ವಹಣೆಗೆ ಸ್ವಚ್ಛ ಸಂಕೀರ್ಣ ಅತ್ಯವಶ್ಯ. ಆ ನಿಟ್ಟಿನಲ್ಲಿ ಸ್ವಚ್ಛ ಸಂಕೀರ್ಣ ಮಾತ್ರವಲ್ಲದೆ ಮಲತ್ಯಾಜ್ಯ ಘಟಕಕ್ಕೂ ಜಮೀನು ಗುರುತಿಸಿ ಕಾಮಗಾರಿ ಪ್ರಗತಿಯಲ್ಲಿದೆ. ಯಶಸ್ವಿ ನಿರ್ವಹಣೆಗೆ ಗ್ರಾಮಸ್ಥರ ಸಹಕಾರ ಅಗತ್ಯ. ರಜನಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಸ್ಥಿರ ಸ್ವಚ್ಛತೆ ಗುರಿ ಸಾಧನೆ ಮತ್ತು ನಿರಂತರ ನಿರ್ವಹಣೆ ಮೂಲಕ ಸುಸ್ಥಿರ, ಮಾದರಿ ಗ್ರಾಮ ನಿರ್ಮಾಣಕ್ಕೆ ಮೂಲಸೌಕರ್ಯ ಅಗತ್ಯ. ಈ ನಿಟ್ಟಿನಲ್ಲಿ ಗಾಂಧಿ ಕನಸಿನ ಗ್ರಾಮ ಸ್ವರಾಜ್ಯದತ್ತ ನರಿಂಗಾನ ಗ್ರಾಮ ಪಂಚಾಯಿತಿ ದಿಟ್ಟ ಹೆಜ್ಜೆ ಇಟ್ಟು ಸಾಗುತ್ತಿರುವುದು ಶ್ಲಾಘನೀಯ. ಶೀನ ಶೆಟ್ಟಿ ಜಿಲ್ಲಾ ಸ್ವಚ್ಛತಾ ರಾಯಭಾರಿ ನೆತ್ತಿಲಪದವಿನಲ್ಲಿ ಪ್ರಗತಿಯಲ್ಲಿರುವ ಮಲತ್ಯಾಜ್ಯ ಘಟಕ ಕಾಮಗಾರಿ. ನೆತ್ತಿಲಪದವಿನಲ್ಲಿ ಪ್ರಗತಿಯಲ್ಲಿರುವ ಮಲತ್ಯಾಜ್ಯ ಘಟಕದ ಕಾಮಗಾರಿ. ನೆತ್ತಿಲಪದವಿನಲ್ಲಿ ಪ್ರಗತಿಯಲ್ಲಿರುವ ಮಲತ್ಯಾಜ್ಯ ಘಟಕದ ಕಾಮಗಾರಿ. https://www.vijayavani.net/mahalaya-amavasya-celebration-in-uppinangadi-field https://www.vijayavani.net/blood-donation-camp-by-yuva-morcha