

ಬೈಲುಕುಪ್ಪೆ: ಕೊಪ್ಪ ಗ್ರಾಮದ ಬಿ.ಎಂ.ರಸ್ತೆ ಮಧ್ಯೆ ಕೊಳಚೆ ನೀರು ಸದಾ ಹರಿಯುತ್ತಿದ್ದು, ಸಾರ್ವಜನಿಕರು ಓಡಾಡಲು ತೊಂದರೆಯಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆರೋಸಿಯಾ ಕಾಲನಿ ಹಾಗೂ ಕಾವೇರಿ ಬಡಾವಣೆಯ ಗಲೀಜು ನೀರು ರಸ್ತೆಯ ಎರಡು ಕಡೆಯ ಚರಂಡಿ ಇಲ್ಲದೆ ಸದಾ ರಸ್ತೆಯ ಮಧ್ಯದಲ್ಲಿ ಹರಿಯುತ್ತಿದೆ. ಕಾವೇರಿ ನದಿ ಸೇತುವೆಯಿಂದ ಕಾವೇರಿ ಬಡಾವಣೆವರೆಗೆ ಎರಡು ಕಡೆ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಹೀಗಾಗಿ ಇಲ್ಲಿನ ಗಲೀಜು ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಪಾದಚಾರಿಗಳಿಗೆ ಓಡಾಡಲು ತುಂಬ ತೊಂದರೆಯಾಗಿದೆ.
ವಾಹನ ಸಂಚಾರದ ವೇಳೆ ರಸ್ತೆಯಲ್ಲಿನ ಗಲೀಜು ನೀರು ಪಾದಾಚಾರಿಗಳ ಮೇಲೆ ಹಾರುತ್ತಿದೆ. ರಸ್ತೆ ಪಕ್ಕದ ಅಲ್ಲಲ್ಲಿ ಗಲೀಜು ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಭೀತಿ ಜನರಲ್ಲಿ ಕಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬಂದು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.