ರಸ್ತೆ ಸಂಚಾರಕ್ಕೆ ಅಡ್ಡಿಯಾದ ಕೊಳಚೆ ನೀರು

17 BIRUR 01
ಬೀರೂರಿನ ಬಿ.ಕೋಡಿಹಳ್ಳಿ ರಸ್ತೆಯ ರೈಲ್ವೆ ಅಂಡರ್‌ಬ್ರಿಡ್ಜ್ ರಸ್ತೆಯಲ್ಲಿ ಕೊಳಚೆ ನೀರು ಸಂಗ್ರಹವಾಗಿರುವುದು.
Published on

ಬೀರೂರು: ಬೀರೂರಿನಿಂದ ಕೋಡಿಹಳ್ಳಿ ಮಾರ್ಗವಾಗಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪಟ್ಟಣದ ರೈಲ್ವೆ ಅಂಡರ್‌ಬ್ರಿಡ್ಜ್ ಸಮೀಪ ಕೊಳಚೆ ನೀರು ಹರಿಯುತ್ತಿರುವುದರಿಂದ ಈ ಮಾರ್ಗವಾಗಿ ಸಂಚರಿಸಲು ಗ್ರಾಮಸ್ಥರು ಹರಸಾಹಸ ಪಡುವಂತಾಗಿದೆ.
ಬಿ.ಕೋಡಿಹಳ್ಳಿ, ಹೂವಿನಹಳ್ಳಿ, ಮುಂಡ್ರೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಪಟ್ಟಣದ ಮಾರ್ಗದ ಕ್ಯಾಂಪ್, ಸಜ್ಜನ್‌ರಾವ್ ಬಡಾವಣೆ, ಪುರಿಭಟ್ಟಿ, ಉಪ್ಪಾರ ಕ್ಯಾಂಪ್ ಬಡಾವಣೆಗಳ ಚರಂಡಿ ನೀರು ಬರುತ್ತಿದೆ. ರಸ್ತೆಗೆ ಡಕ್ ನಿರ್ಮಿಸದಿರುವುದರಿಂದ ಕೊಳಚೆ ನೀರು ಮುಂದಕ್ಕೆ ಸಾಗದೆ ಅಂಡರ್‌ಬ್ರಿಡ್ಜ್ ಒಳಗೆ ಬರುತ್ತಿದ್ದು, ದುರ್ವಾಸನೆ ಹಾಗೂ ಕೊಳಚೆ ತುಳಿಯುವ ಜತೆಗೆ ದ್ವಿ ಚಕ್ರ ಹಾಗೂ ಸೈಕಲ್ ಸವಾರರು ಜೀವ ಭಯದಲ್ಲಿಯೇ ಸಂಚರಿಸುತ್ತಿದ್ದಾರೆ.
ನೀರು ಹರಿಯದಂತೆ ಕ್ರಮಕೈಗೊಳ್ಳುವಂತೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಮ್ಮ ಗ್ರಾಮಗಳಿಗೆ ತೆರಳಲು ಬೇರೆ ಯಾವುದೇ ರಸ್ತೆಯಿಲ್ಲ. ಅಲ್ಲದೆ ದೊಡ್ಡ ವಾಹನಗಳು ಇಲ್ಲಿ ಬರದಂತೆ ಅಂಡರ್‌ಬ್ರಿಡ್ಜ್ ಇರುವುದರಿಂದ ಬಳ್ಳಿಗನೂರು ಗ್ರಾಮದ ಮಾರ್ಗವಾಗಿ ಸಂಚರಿಸಬೇಕಾಗಿದೆ. 8 ಕಿಮೀ ಸುತ್ತಿ ನಮ್ಮ ಗ್ರಾಮ ತಲುಪಬೇಕಿದೆ. ಅಲ್ಲದೆ ಇಲ್ಲಿನ ರಸ್ತೆಯೂ ಸಂಪೂರ್ಣ ಹಾಳಾಗಿದೆ ಎನ್ನುತ್ತಾರೆ ಕೋಡಿಹಳ್ಳಿ ಗ್ರಾಮದ ನಿವಾಸಿ ಕುಮಾರ್.
ಕಳೆದ ಒಂದು ವರ್ಷದ ಹಿಂದೆ ಇದೇ ರೀತಿ ಕೊಳಚೆ ಹರಿಯುತ್ತಿರುವಾಗ ಪುರಸಭೆ ಗಮನಕ್ಕೆ ತಂದಾಗ ತಾತ್ಕಾಲಿಕವಾಗಿ ಮಠದಗುಂಡಿ ಎಂದು ಕರೆಯುವ ಹೊಂಡಕ್ಕೆ ಈ ಕೋಳಚೆ ನೀರು ಹರಿಯುವಂತೆ ಮಾಡಿದ್ದರು. ಈಗ ಅದು ತುಂಬಿ ಮುಂದೆ ಹೋಗಲು ಜಾಗವಿಲ್ಲದೆ ಮತ್ತೆ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಸಾಂಕ್ರಾಮಿಕ ರೋಗ ತಗಲುವ ಭೀತಿ ಎದುರಾಗಿದೆ. ಪುರಸಭೆ ಅಧಿಕಾರಿಗಳು ಕೊಡಲೇ ಕ್ರಮಕೈಗೊಳ್ಳಬೇಕು ಎಂದು ರೈತ ಸಂಘದ ಬೀರೂರು ಘಟಕದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net