

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ರೈಲ್ವೆ ಸ್ಟೇಷನ್ ಬಳಿ ಗಟಾರದಿಂದ ಹೂಳೆತ್ತಲಾದ ಕಸ-ಕಡ್ಡಿ, ಹೊಲಸು ನೀರನ್ನು ರಸ್ತೆಯ ಮೇಲೆ ಹರಿಯಬಿಟ್ಟು ದೊಡ್ಡ ಅಧ್ವಾನ ಮಾಡಲಾಗಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪಾದಚಾರಿಗಳು, ವಾಹನ ಸವಾರರು ಕಳೆದೆರಡು ದಿನಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಹು-ಧಾ ಮಹಾನಗರ ಪಾಲಿಕೆಯಿಂದಲೇ ಗಟಾರ ಹೂಳೆತ್ತುವ ಕೆಲಸ ನಡೆದಿದೆ. ಜೆಸಿಬಿ ಬಳಸಿ ಗಟಾರದಿಂದ ತೆಗೆಯಲಾದ ಹೂಳನ್ನು ರಸ್ತೆ ಪಕ್ಕವೇ ಗುಡ್ಡೆ ಹಾಕಲಾಗಿದೆ. ಕಸ-ಕಡ್ಡಿ, ಮಣ್ಣಿನ ಜತೆ ಸಾಕಷ್ಟು ಪ್ರಮಾಣದಲ್ಲಿ ಹೊಲಸು ನೀರನ್ನು ಸಹ ರಸ್ತೆಯ ಮೇಲೆ ಹರಿಯ ಬಿಡಲಾಗಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶ ಗಬ್ಬೆದ್ದು ಹೋಗಿದ್ದು, ಅಸಹ್ಯಕರ ವಾತಾವರಣ ನಿರ್ವಣವಾಗಿದೆ. ಸತತ ವಾಹನಗಳ ಓಡಾಟದಿಂದ ಕೊಳಚೆ ನೀರು, ತ್ಯಾಜ್ಯಗಳು ಬಹಳ ದೊಡ್ಡ ಏರಿಯಾಗೆ ವಿಸ್ತರಣೆಯಾಗುತ್ತ ಹೋಗುತ್ತಿವೆ.
ನಿತ್ಯ ನೂರಕ್ಕೂ ಹೆಚ್ಚು ರೈಲುಗಳು ಓಡಾಡುವ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ, ನಿರ್ಗಮಿಸುತ್ತಾರೆ. ಕಳೆದೆರಡು ದಿನಗಳಿಂದ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದಲ್ಲಿನ ಹೊಲಸು ಪರಿಸರವನ್ನು ನೋಡಿ ಪ್ರಯಾಣಿಕರು ಹಿಡಿಶಾಪ ಹಾಕುವಂತಾಗಿದೆ. ನಗರದ ಜನದಟ್ಟಣೆಯ ಸ್ಥಳದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗಟಾರದ ಹೊಲಸು ನೀರನ್ನು ರಸ್ತೆ ಮೇಲೆ ಹರಿಯ ಬಿಟ್ಟಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರಿಗೆ ತೊಂದರೆಯಾದರೂ ಡೋಂಟ್ಕೇರ್, ತಾವು ಹೀಗೆಯೇ ಕೆಲಸ ಮಾಡುವುದು ಎಂಬುದು ಪಾಲಿಕೆಯ ಧೋರಣೆಯೇ ಎಂದು ಪ್ರಶ್ನಿಸಿದ್ದಾರೆ. ಯಾರಿಗಾದರೂ ಕೆಲಸವನ್ನು ವಹಿಸಿಕೊಟ್ಟ ಮೇಲೆ ಅಧಿಕಾರಿಗಳು ಮೇಲ್ವಿಚಾರಣೆ ಮಾಡದಿದ್ದರೆ ಹೀಗೆಯೇ ಆಗುವುದು.