

ಹುಬ್ಬಳ್ಳಿ: ನಿರಂತರ ಮಳೆ ಸುರಿದ ಹಿನ್ನೆಲೆಯಲ್ಲಿ ನಗರದ ತಗ್ಗು ಪ್ರದೇಶ ಹಾಗೂ ಮನೆಗಳಿಗೆ ನೀರು ನುಗ್ಗಿ ತ್ಯಾಜ್ಯ ಸಂಗ್ರಹವಾಗಿದ್ದು, ನಿವಾಸಿಗಳು ವಿಲೇವಾರಿಯಲ್ಲಿ ನಿರತರಾಗಿದ್ದಾರೆ.
ಅಪಾರ್ಟ್ವೆುಂಟ್, ಮನೆಗಳಿಗೆ ನಿರಂತರ ಮಳೆಯಿಂದ ನೀರು ನುಗ್ಗಿದೆ. ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಈ ವೇಳೆ ಅಪಾರ್ಟ್ವೆುಂಟ್ ಕೆಳಗೆ ಹಾಗೂ ಮನೆಗಳಲ್ಲಿ ಮಳೆ ನೀರಿನೊಂದಿಗೆ ಚರಂಡಿ ನೀರು ಸಹ ಸಂಗ್ರಹವಾಗಿತ್ತು. ಕ್ರಿಮಿ, ಕೀಟಗಳ ಕಾಟವೂ ಮಿತಿ ಮೀರಿದೆ. ಮಳೆ ಸುರಿಯುವುದು ಬಿಡುವು ನೀಡಿದಾಗಲೆಲ್ಲ ಸ್ಥಳೀಯರೇ ಮುಂದಾಗಿ ಸಂಗ್ರಹವಾದ ನೀರು, ತ್ಯಾಜ್ಯವನ್ನು ಹೊರ ಹಾಕುತ್ತಿದ್ದಾರೆ.
ರಸ್ತೆಗಳೂ ಹಾಳು: ಕೆಲ ಬಡಾವಣೆಯ ಮನೆಯ ಮುಂದಿನ ರಸ್ತೆಗಳು ನಿರಂತರ ಮಳೆಯಿಂದ ಹಾಳಾಗಿವೆ. ವಾಹನ ಹಾಗೂ ಜನ ಸಂಚಾರವೂ ಕಷ್ಟವಾಗಿದೆ. ತಗ್ಗು, ಗುಂಡಿಗಳಲ್ಲಿ ನೀರು ಸಂಗ್ರಹವಾಗಿದ್ದು, ಬಹಳಷ್ಟು ಜನರು ಜಾರಿ ಬಿದ್ದು ಗಾಯಗೊಂಡ ಉದಾಹರಣೆಗಳಿವೆ.
ಪಾಲಿಕೆ ಕಾರ್ಯಾಚರಣೆ: ಈ ಮಧ್ಯೆ ಅಲ್ಲಲ್ಲಿ ಬಿದ್ದಿರುವ ಮರಗಳನ್ನು ಪಾಲಿಕೆ ಸಿಬ್ಬಂದಿ ವಿಲೇವಾರಿ ಮಾಡಿದ್ದಾರೆ. ಸಂಗ್ರಹವಾಗಿರುವ ನೀರು, ತ್ಯಾಜ್ಯವನ್ನೂ ತೆಗೆಸಿದ್ದಾರೆ. ನಿರಂತರ ಮಳೆ ಸುರಿದಿದ್ದರಿಂದ ಎಚ್ಚೆತ್ತಿರುವ ಪಾಲಿಕೆ ಸಿಬ್ಬಂದಿಯ ದಿಢೀರ್ ಕಾರ್ಯಾಚರಣೆಯಿಂದ ಅಂಥದ್ದೇನು ಸಮಸ್ಯೆ ಕಂಡುಬಂದಿಲ್ಲ.