

ಹೆಬ್ರಿ: ವಿದ್ಯಾರ್ಥಿಗಳು ವ್ಯಸನಗಳಿಗೆ ಒಳಗಾದರೆ ಅನೇಕ ಅನಾಹುತ ಸಂಭವಿಸಬಹುದು. ಸಿಕ್ಕಿ ಬಿದ್ದರೆ ಕಾನೂನು ಚೌಕಟ್ಟಿನಲ್ಲಿ ಕಠಿಣ ಶಿಕ್ಷೆಯಾಗುತ್ತದೆ ಎಂದು ಹೆಬ್ರಿ ಪಿಎಸ್‌ಐ ಮಾಹಾಂತೇಶ ಜಾಬಗೌಡ ಹೇಳಿದರು.
ಹೆಬ್ರಿ ತಾಲೂಕು ಆಡಳಿತ ವತಿಯಿಂದ ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ ಪೊಲೀಸ್ ಠಾಣೆ ಸಹಯೋಗದೊಂದಿಗೆ ಶ್ರೀ ಮಾಹಾಂತ ಶಿವಯೋಗಿ ಅವರ ದಿನಾಚರಣೆ ಪ್ರಯುಕ್ತ ಆಯೋಜಿಸಲಾದ ವ್ಯಸನಮುಕ್ತ ದಿನಾಚರಣೆಯಲ್ಲಿ ಮಾತನಾಡಿದರು.
ತಹಸೀಲ್ದಾರ್ ಎಸ್.ಎ.ಪ್ರಸಾದ್ ಶ್ರೀ ಮಾಹಾಂತ ಶಿವಯೋಗಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಬದುಕಿಗೆ ಕೆಡುಕು ಉಂಟು ಮಾಡುವ ಕೆಟ್ಟ ವ್ಯಸನ ಬಿಟ್ಟು ಓದುವ ಒಳ್ಳೆ ಹವ್ಯಾಸ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹೆಬ್ರಿ ಗ್ರಾಪಂ ಅಧ್ಯಕ್ಷ ತಾರಾನಾಥ ಬಂಗೇರ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಎಸ್.ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಐಕ್ಯೂಎಸಿ ಸಂಚಾಲಕ ಡಾ.ಗಣೇಶ್ ಎಸ್.ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಬಾಲರಾಜ್ ಡಿ.ಬಿ.ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ಪ್ರವೀಣ ಕುಮಾರ್ ಎಸ್.ನಿರೂಪಿಸಿದರು. ಆಂಗ್ಲ ವಿಭಾಗದ ಮುಖ್ಯಸ್ಥ ಪ್ರವೀಣ ಶೆಟ್ಟಿ ವಂದಿಸಿದರು.