

ತುಮಕೂರು: ಹಳೇ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಗೂಳೂರು ಹೋಬಳಿ ಹೊನ್ನೇನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಬಿಜೆಪಿ ಮುಖಂಡ, ಗ್ರಾಪಂ ಮಾಜಿ ಸದಸ್ಯ ವೆಂಕಟೇಶ್ ಕುಮ್ಮಕ್ಕಿನಿಂದ 25ಕ್ಕೂ ಹೆಚ್ಚು ಜನರು ಜೆಡಿಎಸ್ ಜತೆ ಗುರುತಿಸಿಕೊಂಡಿರುವ 2 ಕುಟುಂಬಗಳ ಮೇಲೆ ದಾಳಿ ಮಾಡಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ರಾಧಾಕೃಷ್ಣ, ರಂಗಸ್ವಾಮಯ್ಯ, ಸಂಜೀವಮ್ಮ, ರಂಗಪ್ಪ ಹಾಗೂ ಶ್ರೀನಿವಾಸ್‌ಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಳೇ ರಾಜಕೀಯ ವೈಷಮ್ಯ: ಹೊನ್ನೇನಹಳ್ಳಿಯಲ್ಲಿ ಒಂದೇ ಸಮುದಾಯದ 80-90 ಮನೆಗಳಿದ್ದು, ಬಹುತೇಕ ಕುಟುಂಬಗಳು ಬಿಜೆಪಿ ಜತೆ ಗುರುತಿಸಿಕೊಂಡಿದ್ದರೆ, ಐದಾರು ಕುಟುಂಬಗಳು ಜೆಡಿಎಸ್ ಬೆಂಬಲಿಸಿಕೊಂಡು ಬಂದಿವೆ. 3-4 ದಿನಗಳ ಹಿಂದೆ ಬಿಜೆಪಿ ಬೆಂಬಲಿಗ ಗುತ್ತಿಗೆದಾರ ರಾಮಕೃಷ್ಣಪ್ಪ ಎಂಬಾತ ರಂಗಸ್ವಾಮಯ್ಯ ವಿರುದ್ಧ ಹೆಬ್ಬೂರು ಠಾಣೆಯಲ್ಲಿ ಕಳ್ಳತನ ಆರೋಪಹೊರಿಸಿ ದೂರು ಕೊಟ್ಟಿದ್ದು, ಈ ಸಂಬಂಧ ಹೊಗೆಯಾಡುತ್ತಿದ್ದ ವೈಷಮ್ಯ ಶುಕ್ರವಾರ ಬೆಂಕಿಹೊತ್ತಿಸಿದೆ.
ಸ್ಥಳಕ್ಕೆ ಎಸ್ಪಿ ಭೇಟಿ: ಗಲಾಟೆ ನಡೆದ ಹೊನ್ನೇನಹಳ್ಳಿಗೆ ಶನಿವಾರ ಎಸ್ಪಿ ಡಾ.ಕೆ.ವಂಶಿಕೃಷ್ಣ ಭೇಟಿ ನೀಡಿ ಮಾಹಿತಿ ಪಡೆದರು. ಸಿಪಿಐ ರಾಮಕೃಷ್ಣಪ್ಪ, ಪಿಎಸ್ಸೈ ಲಕ್ಷ್ಮಯ್ಯ ಇದ್ದರು. ಶಾಸಕರ ಭೇಟಿ: ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹಲ್ಲೆಗೊಳಗಾದ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದ್ದಲ್ಲದೆ ಪೊಲೀಸರು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.
ಜಿಲ್ಲಾ ಆಸ್ಪತ್ರೆಗೆ ಭೇಟಿ : ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೆಡಿಎಸ್ ಕಾರ್ಯಕರ್ತರಿಗೆ ಶಾಸಕ ಡಿ.ಸಿ.ಗೌರಿಶಂಕರ್, 25 ಸಾವಿರ ರೂ., ನೀಡಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಅವರಿಗೆ ಉತ್ತಮ ಚಿಕಿತ್ಸೆ ಕೊಡುವಂತೆ ಸೂಚಿಸಿದರು. ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಗುಂಪಿನಲ್ಲಿ ನೆಲಮಂಗಲ, ದೊಡ್ಡಬಳ್ಳಾಪುರ ತಾಲೂಕಿನ ರೌಡಿಶೀಟರ್‌ಗಳು ಇದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಏಕಾಏಕಿದಾಳಿ: ವೆಂಕಟೇಶ್, ರವಿ, ಮಂಜುನಾಥ್ ಸೇರಿ 25ಕ್ಕೂ ಹೆಚ್ಚು ಜನರು ಏಕಾಏಕಿ ಶುಕ್ರವಾರ ಸಂಜೆ ರಂಗಸ್ವಾಮಯ್ಯ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ರಾಧಾಕೃಷ್ಣ, ಸಂಜೀವಮ್ಮ ಮೇಲೂ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ದಾಳಿ ತಡೆಯಲು ಬಂದ ಶ್ರೀನಿವಾಸ, ರಂಗಪ್ಪ ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳ ಸಮೇತ ಜೆಡಿಎಸ್ ಮುಖಂಡರು ಶುಕ್ರವಾರ ತಡರಾತ್ರಿ ಗ್ರಾಮಾಂತರ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ ಹೈಡ್ರಾಮವೂ ನಡೆಯಿತು. ಆನಂತರ ಪೊಲೀಸರೇ ಗಾಯಾಳುಗಳನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
2 ವರ್ಷಗಳಿಂದ ಕ್ಷೇತ್ರದಲ್ಲಿ ಅಹಿತಕರ ಘಟನೆ ನಡೆದಿಲ್ಲ. ಈಗ ಬಿಜೆಪಿ ಕಾರ್ಯಕರ್ತರು ಹಳೆಯ ದ್ವೇಷದಿಂದ ಈ ರೀತಿ ದ್ವೇಷ ಸಾಧಿಸುತ್ತಿದ್ದಾರೆ. ಇದಕ್ಕೆ ಸಿಪಿಐ, ಪಿಎಸ್ಸೈ ಕುಮ್ಮಕ್ಕು ಇದೆ. ಈ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಎಸ್ಪಿ ಕಚೇರಿ ಮುಂದೆ ಮಂಗಳವಾರ ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು. ಡಿ.ಸಿ.ಗೌರಿಶಂಕರ್ ಗ್ರಾಮಾಂತರ ಶಾಸಕ