

ಉಡುಪಿ: ಸಣ್ಣ ಮಕ್ಕಳಲ್ಲಿ ಅತಿಸಾರ ಭೇದಿ ಉಂಟಾದಲ್ಲಿ ಕೂಡಲೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಕೊಡಿಸಬೇಕು. ಇದರಿಂದ ಮಕ್ಕಳು ಉತ್ತಮ ಆರೋಗ್ಯದಿಂದಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ಬುಧವಾರ ಸರ್ಕಾರಿ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಹಾಗೂ ಸಾಮಾಜಿಕ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅತಿಸಾರ ಭೇದಿ ಹಿನ್ನೆಲೆಯಲ್ಲಿ ಮಕ್ಕಳ ಸಾವು ಹೆಚ್ಚುತ್ತಿವೆ. ಇದನ್ನು ತಪ್ಪಿಸಲು ಸರ್ಕಾರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಕಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಆರೋಗ್ಯ ಶಿಕ್ಷಣದ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದರು.
ನವಜಾತ ಶಿಶುಗಳಿಗೆ ತಾಯಂದಿರು ತಪ್ಪದೇ ಎದೆ ಹಾಲನ್ನು ಕುಡಿಸಬೇಕು. ಇದರಿಂದಾಗಿ ಮಕ್ಕಳ ದೇಹದಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ. ಇದರ ಜೊತೆಯಲ್ಲಿ ಆರು ತಿಂಗಳ ನಂತರ ಪೌಷ್ಠಿಕ ಆಹಾರ ನೀಡಿದ್ದಲ್ಲಿ ಮಕ್ಕಳು ಸದೃಢರಾಗಿ ಬೆಳೆಯಲು ಸಹಕಾರಿಯಾಗುವುದರ ಜೊತೆಗೆ ಸಮಾಜದಲ್ಲಿ ಆರೋಗ್ಯ ಸುಧಾರಣೆ ಆಗುತ್ತದೆ ಎಂದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಲ್ಲಿ ಮಾತ್ರ ಜನರು ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.
ಪ್ರಭಾರ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎಂ.ಓ ಡಾ.ವಾಸುದೇವ, ಡಾ.ವೇಣುಗೋಪಾಲ್, ಡಾ.ರಾಜಗೋಪಾಲ ಭಂಡಾರಿ, ಡಾ.ಮಹಾದೇವ ಭಟ್, ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಸ್ವಾಗತಿಸಿದರು. ಡಾ.ವೇಣುಗೋಪಾಲ್ ವಂದಿಸಿದರು.