

ಬೆಂಗಳೂರು: ತಮ್ಮ ನಗರಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ನಾಗರಿಕ ಚಟುವಟಿಕೆಯಲ್ಲಿ ಶಾಲಾ ಮಕ್ಕಳ ಭಾಗವಹಿಸುವಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಬ್ರಾಂಡ್ ಬೆಂಗಳೂರು ಐಡಿಯಾಥಾನ್ ೨೦೨೩ ಸ್ಪರ್ಧೆಯ ಅಂತಿಮ ಸುತ್ತಿಗೆ ಏಳು ಶಾಲಾ ತಂಡಗಳು ಆಯ್ಕೆಯಾಗಿವೆ.
ರಾಜ್ಯ ಸರ್ಕಾರದ ಬ್ರಾಂಡ್ ಬೆಂಗಳೂರು ಯೋಜನೆಯ ಮೂಲಕ ನಗರವನ್ನು ಸ್ವಚ್ಛ, ಹಸಿರು ಹಾಗೂ ಸುಸ್ಥಿರ ನಗರವಾಗಿ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಐಡಿಯಾಥಾನ್ ೨೦೨೩ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದೊಂದು ಅಂತರ ಶಾಲಾ ಸ್ಪರ್ಧೆಯಾಗಿದ್ದು, ಈ ಸ್ಪರ್ಧೆಯಲ್ಲಿ ನಗರದ ಸಮಸ್ಯೆಗಳಿಗೆ ಶಾಲಾ ಮಕ್ಕಳು ಪರಿಹಾರ ನೀಡುವ ಅವಕಾಶ ಕಲ್ಪಿಸಿಕೊಟ್ಟಿದೆ. ಆ ಮೂಲಕ ಮಕ್ಕಳ ಮಿದುಳಿನ ಸಾಮರ್ಥ್ಯ ಪೋಷಿಸುವ ಪ್ರಯತ್ನವಾಗಿದೆ.
೯ನೇ ತರಗತಿಯಿಂದ ಪಿಯುಸಿ ಕಾಲೇಜು ಮಕ್ಕಳ ಸ್ಪರ್ಧೆ ಇದಾಗಿದ್ದು, ಐಶ್ವರ್ಯ ಡಿಕೆಎಸ್ ಹೆಗಡೆ ಈ ಕಾರ್ಯಕ್ರಮದ ರೂವಾರಿಯಾಗಿದ್ದಾರೆ.
ಈ ಸ್ಪರ್ಧೆಗೆ ನೊಂದಣಿಯಾಗಿದ್ದ ಶಾಲೆಗಳ ಪೈಕಿ ಅಗ್ರ ೫೦ ಶಾಲೆಗಳು ಈ ಸ್ಪರ್ಧೆಗೆ ಆಯ್ಕೆಯಾಗಿದ್ದವು. ನಂತರದ ಹಂತದ ಸ್ಪರ್ಧೆಯಿಂದ ಅಗ್ರ ೨೫ ಶಾಲೆಗಳು ಸ್ಪರ್ಧೆಯಲ್ಲಿ ಮುಂದುವರಿದವು. ನಗರದ ವಿವಿಧ ಕ್ಷೇತ್ರಗಳ ಗಣ್ಯರು ಈ ಸ್ಪರ್ಧೆಯ ತೀರ್ಪುಗಾರರರಾಗಿದ್ದು ಶಾಲಾ ಮಕ್ಕಳು ನಗರದ ಅಭಿವೃದ್ಧಿಗೆ ತಮ್ಮ ಆಲೋಚನೆ ನೀಡಿದ್ದಾರೆ.
೨೫ ಶಾಲೆಗಳ ಪೈಕಿ ಬನಶಂಕರಿಯ ಪ್ರೆಸಿಡೆನ್ಸಿ ಶಾಲೆ, ಎಸ್‌ಜೆಆರ್ ಕೆಂಗೇರಿ ಪಬ್ಲಿಕ್ ಶಾಲೆ, ಆರ್ಕಿಡ್ ಇಂಟರ್ ನ್ಯಾಷನಲ್ ಶಾಲೆ, ಸೇಂಟ್ ಮಾರ್ಕ್ಸ್ ಕಾನ್ವೆಂಟ್, ನ್ಯಾಷನಲ್ ಹಿಲ್ ವ್ಯೆ ಪಬ್ಲಿಕ್ ಶಾಲೆ ಬನಶಂಕರಿ, ಮಿತ್ರಾ ಅಕಾಡೆಮಿ, ಕಸ್ತೂರಿ ನಗರ ಪ್ರೆಸಿಡೆನ್ಸಿ ಶಾಲೆ ಅಂತಿಮ ಸುತ್ತಿಗೆ ಪ್ರವೇಶ ಪಡೆದಿವೆ.
ಈ ಸ್ಪರ್ಧೆಯ ಅಂತಿಮ ಸುತ್ತನ್ನು ಜನವರಿ ೧೩ ರಂದು ನಡೆಯುವ ಯೂತ್ ಲೀಡರ್ ಶಿಪ್ ಸಮ್ಮೇಳನ ಕಾರ್ಯಕ್ರಮದಲ್ಲಿ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಶಿಕ್ಷಣ ತಜ್ಞೆ, ಲೇಖಕಿ, ಸುಧಾ ಮೂರ್ತಿ,ನಟ ರಮೇಶ್ ಅರವಿಂದ್, ಐಎಎಸ್ ಅಧಿಕಾರಿ ಡಾ.ಶಾಲಿನಿ ರಜನೀಶ್ ಭಾಗವಹಿಸಲಿದ್ದಾರೆ.