ಕೆಎಲ್​ಇ ತಾಂತ್ರಿಕ ವಿವಿ 7 ಸಂಶೋಧಕರಿಗೆ ಸ್ಥಾನ

kle
Published on

ಹುಬ್ಬಳ್ಳಿ: ವಿಶ್ವದ ಅಗ್ರ ಶೇ. 2ರಷ್ಟು ಪ್ರಭಾವಶಾಲಿ ವಿಜ್ಞಾನಿಗಳ ಪಟ್ಟಿಯಲ್ಲಿ ಇಲ್ಲಿಯ ಪ್ರತಿಷ್ಠಿತ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು-ಸಂಶೋಧಕರು ಸ್ಥಾನ ಪಡೆದಿದ್ದಾರೆ.

ಎಲ್ಸೆವಿಯರ್ ಪಬ್ಲಿಕೇಶನ್ಸ್​ನ ಸಹಯೋಗದೊಂದಿಗೆ ಸ್ಟ್ಯಾನಪೋರ್ಡ್ ವಿಶ್ವವಿದ್ಯಾಲಯವು ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೆಎಲ್​ಇ ತಾಂತ್ರಿಕ ವಿವಿಯ ಸ್ಕೂಲ್ ಆಫ್ ಅಡ್ವಾನ್ಸ್ಡ್ ಸೈನ್ಸ್​ಸ್​ನ ಪ್ರೊ. ತೇಜರಾಜ ಅಮ್ಮಿನಭಾವಿ, ಡಾ. ನಾಗರಾಜ ಶೆಟ್ಟಿ, ಡಾ. ಮೋಹನಕೃಷ್ಣ ಗುಂಡಾ, ಡಾ. ಶ್ವೇತಾ ಮಾಳೋದೆ ಮತ್ತು ಪ್ರೊ. ಪ್ರಭುಗೌಡ ಪಾಟೀಲ ಹಾಗೂ ಸ್ಕೂಲ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್​ನ ಪ್ರೊ. ವಿನಾಯಕ ಗಾಯತೊಂಡೆ ಮತ್ತು ಪ್ರೊ. ನಾಗರಾಜ ಬಾಣಾಪುರಮಠ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

2022ನೇ ಸಾಲಿನಲ್ಲಿ ಸುಮಾರು 22 ವೈಜ್ಞಾನಿಕ ವಿಷಯಗಳ ಕ್ಷೇತ್ರದಲ್ಲಿನ ಬರಹ, ಪ್ರಕಟಣೆ, ಇತ್ಯಾದಿ ಮಾಹಿತಿಗಳು ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿನ ಜೀವಮಾನ ಸಾಧನೆ- ಹೀಗೆ ಎರಡು ವಿಭಾಗಗಳ ಗಣನೀಯ ಕೊಡುಗೆಗಳನ್ನು ಪರಿಗಣಿಸಿ ಸ್ಟ್ಯಾನಪೋರ್ಡ್ ವಿಶ್ವವಿದ್ಯಾಲಯವು ಈ ಪಟ್ಟಿಯನ್ನು ಪ್ರಕಟಿಸಿದೆ.

ಪ್ರೊ. ತೇಜರಾಜ್, ಡಾ. ಶೆಟ್ಟಿ, ಪ್ರೊ. ಗಾಯತೊಂಡೆ ಹಾಗೂ ಪ್ರೊ. ಪ್ರಭುಗೌಡ ಅವರು ಎರಡೂ ವಿಭಾಗಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಪ್ರೊ. ತೇಜರಾಜ ಹಾಗೂ ಡಾ. ಶೆಟ್ಟಿ ಸತತ 5ನೇ ವರ್ಷ ವಿಶ್ವದ ಅಗ್ರ ಶೇ. 2ರಷ್ಟು ಪ್ರಭಾವಶಾಲಿ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಪ್ರೊ. ಗಾಯತೊಂಡೆ, ಪ್ರೊ. ಬಾಣಾಪುರಮಠ, ಡಾ. ಗುಂಡಾ ಹಾಗೂ ಡಾ. ಶ್ವೇತಾ ಸತತ 2ನೇ ವರ್ಷ ಈ ಮನ್ನಣೆಗೆ ಪಾತ್ರರಾಗಿದ್ದಾರೆ.

‘ನಮ್ಮ ಸಂಶೋಧಕರು ವಿಶ್ವದ ಅಗ್ರ ಶೇ. 2ರಷ್ಟು ಪ್ರಭಾವಶಾಲಿ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಸಂಶೋಧನಾ ಕ್ಷೇತ್ರಕ್ಕೆ ಅತ್ಯುನ್ನತ ಕೊಡುಗೆಗಳನ್ನು ನೀಡುವ ಮೂಲಕ ಇವರು ಕೆಎಲ್​ಇ ತಾಂತ್ರಿಕ ವಿವಿಯನ್ನು ಜಾಗತಿಕ ಮಟ್ಟಕ್ಕೆ ಮುಟ್ಟಿಸಿದ್ದಾರೆ. ಈ ಮನ್ನಣೆಯು ಕೆಎಲ್​ಇ ತಾಂತ್ರಿಕ ವಿವಿಯು ಉತ್ಕೃಷ್ಟ ಸಂಶೋಧನೆ ನೀಡುತ್ತಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net