ವೃದ್ಧನ ಕೊಲೆ ಮಾಡಿದ್ದ ಏಳು ಮಂದಿಗೆ ಜೀವಾವಧಿ ಶಿಕ್ಷೆ

dist Court building
Published on

ಶಿವಮೊಗ್ಗ: ಎರಡು ಕುಟುಂಬಗಳ ನಡುವೆ ಜಮೀನಿನ ವೈಷಮ್ಯದಲ್ಲಿ ವೃದ್ಧನ ಕೊಲೆ ಮಾಡಿದ್ದ ಏಳು ಮಂದಿಗೆ ಶಿವಮೊಗ್ಗದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಭದ್ರಾವತಿ ಪೀಠಾಸೀನ) ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ 50 ಸಾವಿರ ರೂ. ದಂಡ ವಿಧಿಸಿದೆ.

ಭದ್ರಾವತಿ ತಾಲೂಕಿನ ಭದ್ರಾಪುರದ ಪರಮೇಶ, ಜಗದೀಶ, ರಮೇಶ, ಗೌತಮ್, ಅಭಿಷೇಕ, ವಿಕ್ರಮ್ ಮತ್ತು ಸಂಜಯ್ ಜೀವಾವಧಿ ಶಿಕ್ಷೆಗೆ ಒಳಗಾದವರು. ಭದ್ರಾಪುರದ ಗ್ರಾಮದ ಕರಿಯಪ್ಪ (65) ಎಂಬುವರನ್ನು ಕೊಲೆ ಮಾಡಲಾಗಿತ್ತು.

ಭದ್ರಾಪುರ ಗ್ರಾಮದ ನಾಗರಾಜ ಹಾಗೂ ಬಡ್ಡಿ ಪರಮೇಶ್ವರಪ್ಪ ಅವರ ಕುಟುಂಬಗಳ ಮಧ್ಯೆ ಜಮೀನಿನ ವಿಚಾರವಾಗಿ ಹಿಂದಿನಿಂದಲೂ ವೈಮನಸ್ಸಿತು. ಅದೇ ವಿಚಾರವಾಗಿ 2020ರ ಮಾ.5ರಂದು ರಾತ್ರಿ ಬಡ್ಡಿ ಪರಮೇಶ, ಜಗದೀಶ, ರಮೇಶ, ಮಂಜಪ್ಪ , ಗೌತಮ್, ಅಭಿಷೇಕ್, ಶರತ್, ವಿಕ್ರಮ್, ಸಂಜಯ್ ಹಾಗೂ ಕೃತಿಕ್ ಎಂಬುವರು ಮಾರಕಾಸ್ತ್ರಗಳಿಂದ ನಾಗರಾಜ್ ಅವರ ತಂದೆ ಕರಿಯಪ್ಪ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕರಿಯಪ್ಪ ಮೃತಪಟ್ಟಿದ್ದು, ಹೊಳೆಹೊನ್ನೂರು ಠಾಣೆಯಲ್ಲಿ ಕೊಲೆ ಸೇರಿ ಹಲವು ಕಲಂ ಅಡಿ ಪ್ರಕರಣ ದಾಖಲಾಗಿತ್ತು.

ಆಗಿನ ಭದ್ರಾವತಿ ಗ್ರಾಮಾಂತರ ವೃತ್ತ ನಿರೀಕ್ಷ ಇ.ಒಮಂಜುನಾಥ್ ಅವರು ತನಿಖೆ ನಡೆಸಿದ್ದರು. ಹಾಲಿ ಇನ್‌ಸ್ಪೆಕ್ಟರ್ ಆರ್.ಎಲ್.ಲಕ್ಷ್ಮೀಪತಿ ತನಿಖೆ ಪೂರ್ಣಗೊಳಿಸಿ ದೋಷಾರೋಪಣ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಏಳು ಮಂದಿಗೂ ವಿವಿಧ ಕಲಂ ಅಡಿ ಶಿಕ್ಷೆ ನೀಡಿ ಆದೇಶಿಸಿದ್ದಾರೆ.

ಐಪಿಸಿ ಕಲಂ 143ಕ್ಕೆ 6 ತಿಂಗಳು ಕಾರವಾಸ, 2 ಸಾವಿರ ರೂ. ದಂಡ, ಕಲಂ 147ಕ್ಕೆ 2 ವರ್ಷ ಕಾರವಾಸ, 10 ಸಾವಿರ ರೂ. ದಂಡ, ಕಲಂ 148ಕ್ಕೆ 3 ವರ್ಷ ಕಾರವಾಸ, 15 ಸಾವಿರ ರೂ. ದಂಡ, ಕಲಂ 504ಕ್ಕೆ 2 ವರ್ಷ ಕಾರವಾಸ, 10 ಸಾವಿರ ರೂ. ದಂಡ, ಕಲಂ 341ಕ್ಕೆ 1 ತಿಂಗಳು ಕಾರವಾಸ, 500 ರೂ. ದಂಡ, ಕಲಂ 323ಕ್ಕೆ 1 ವರ್ಷ ಕಾರವಾಸ, 1 ಸಾವಿರ ರೂ. ದಂಡ, ಕಲಂ 324ಕ್ಕೆ 3 ವರ್ಷ ಕಾರವಾಸ, 15 ಸಾವಿರ ರೂ. ದಂಡ, ಕಲಂ 307ಕ್ಕೆ 10 ವರ್ಷ ಕಾರವಾಸ, 25 ಸಾವಿರ ರೂ. ದಂಡ, ಕಲಂ 302ಕ್ಕೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ರೂಪಾಯಿ ದಂಡ, ಕಲಂ 506ಕ್ಕೆ 2 ವರ್ಷ ಕಾರವಾಸ, 10 ಸಾವಿರ ರೂ. ದಂಡ ವಿಧಿಸಿದೆ. ಸರ್ಕಾರಿ ಅಭಿಯೋಜಕಿ ಪಿ.ರತ್ನಮ್ಮ ಅವರು ಸರ್ಕಾರದ ಪರವಾಗಿ ಪ್ರಕರಣದ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net