ಚಿಂದಿ ಆಯುವ ನೆಪದಲ್ಲಿ ಬಂದು ಕಳವು, ಏಳು ಜನರ ಬಂಧನ

Published on

ಮೈಸೂರು: ಚಿಂದಿ ಆಯುವ ನೆಪದಲ್ಲಿ ಬಂದು ಕೈಗಾರಿಕೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಏಳು ಜನರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮನಗರದ ಶೇಖರ್, ಮಧು, ಶ್ರೀನಿವಾಸ್, ಹಖ್‌ವುಲ್ಲಾ, ಮಂಡ್ಯದ ಪಾರ್ವತಿ, ಕುಪ್ಪಮ್ಮ ಹಾಗೂ ಮೈಸೂರಿನ ಆದಿಲಕ್ಷ್ಮಿ ಬಂಧಿತ ಆರೋಪಿಗಳು.

ಇವರು ಚಿಂದಿ ಆಯುವ ನೆಪದಲ್ಲಿ ಕಾರ್ಖಾನೆಗಳನ್ನು ಗುರುತಿಸಿ, ನಂತರ ಸಹಚರರೊಂದಿಗೆ ತೆರಳಿ ಕಿಟಕಿ ಮುರಿದು, ಬೆಲೆ ಬಾಳುವ ತಾಮ್ರದ ತಂತಿ, ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದರು.

ಈ ತಂಡ ಅಕ್ಟೋಬರ್ 14ರಂದು ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮ್ಯಾಗ್ನೆಟಿಕ್ ಕಾರ್ಖಾನೆ, ಡೀಕೇಮ್ ರೆಸಿನ್ಸ್ ಲಿಮಿಟೆಡ್ ಸ್ಟೋರ್ ಬಳಿ ಚಿಂದಿ ಆಯುವ ನೆಪದಲ್ಲಿ ಅಲ್ಲಿನ ಪರಿಸರವನ್ನು ಗಮನಿಸಿದ್ದರು. ಬಳಿಕ ರಾತ್ರಿ ರೋಲಿಂಗ್ ಶೆಟರ್ ಮೀಟಿ ಒಳ ನುಗ್ಗಿ ಕಳ್ಳತನ ಮಾಡಿದ್ದರು.

ಈ ಬಗ್ಗೆ ಮಾಲೀಕರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಶೇಖರ್‌ನನ್ನು ರಾಮನಗರದ ಕೈಗಾರಿಕಾ ಪ್ರದೇಶದಲ್ಲಿ ಬಂಧಿಸಿದರು. ಈ ವೇಳೆ ಆತ ನೀಡಿದ ಸುಳಿವಿನ ಮೇರೆಗೆ 7 ಲಕ್ಷ ಮೌಲ್ಯದ 606 ಕೆ.ಜಿ ತಾಮ್ರದ ತಂತಿ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಕುಸುಮ ಚಂದ್ರಶೇಖರ್ ಕಲ್ಯಾಣ ಮಂಟಪದ ಬಳಿ ಗೂಡ್ಸ್ ವಾಹನಗಳಲ್ಲಿ ತೆರಳುತ್ತಿದ್ದ ಇತರೆ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯನಗರ ಉಪವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ವಿಜಯನಗರ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಡಿ.ಸುರೇಶ್ ಕುಮಾರ್, ಸಬ್ ಇನ್‌ಸ್ಪೆಕ್ಟರ್‌ಗಳಾದ ನಾರಾಯಣ್ ಮತ್ತು ಡಿ.ಕೃಷ್ಣ, ಸಿಬ್ಬಂದಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net