

ಬೆಂಗಳೂರು: ಬೆಂಗಳೂರನ್ನು ದೇಶದಲ್ಲೇ ಬಂಡವಾಳ ಹೂಡಿಕೆ ಸ್ನೇಹಿ ನಗರವನ್ನಾಗಿಸುವ ಸಲುವಾಗಿ ಈಸ್ ಆಫ್ ಡೂಯಿಂಗ್ (ಇಒಡಿ) ಬಿಜಿನೆಸ್ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದ 7 ಇಲಾಖೆಗಳ ಅಧಿಕಾರಿಗಳನ್ನು ಅಧ್ಯಯನ ಪ್ರವಾಸಕ್ಕಾಗಿ ನ್ಯೂಜಿಲೆಂಡ್ಗೆ ಕಳುಹಿಸಲಾಗುತ್ತಿದೆ.
ದೇಶದ ಇತರ ಮೂರು ನಗರಗಳೊಂದಿಗೆ ಈಸ್ ಆಫ್ ಡೂಯಿಂಗ್ ಬಿಜಿನೆಸ್ನಲ್ಲಿ ಪೈಪೋಟಿಗಿಳಿದಿರುವ ಬೆಂಗಳೂರು, ಮೊದಲ ಸ್ಥಾನ ಪಡೆಯಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ. ವಿಶ್ವಸಂಸ್ಥೆ ನಿಗದಿ ಮಾಡಿರುವಂತೆ ದೇಶದ ನಾಲ್ಕು ನಗರಗಳು ಈ ಬಾರಿ ಇಒಡಿ ಬಿಜಿನೆಸ್ಗಾಗಿ ಪೈಪೋಟಿ ನಡೆಸುತ್ತಿವೆ. ಬೆಂಗಳೂರು ಜತೆಗೆ ದೆಹಲಿ, ಮುಂಬೈ ಮತ್ತು ಕೋಲ್ಕತ ಕೂಡ ಇದರಲ್ಲಿ ತೊಡಗಿಕೊಂಡಿವೆ. ಅದರಂತೆ ಬಂಡವಾಳ ಹೂಡಿಕೆ ಮತ್ತು ಉದ್ಯಮ ಆರಂಭಿಸುವುದಕ್ಕೆ ಉತ್ತಮ ಎಂದು ಗುರುತಿಸಿಕೊಳ್ಳುವ ನಗರ ಇಒಡಿ ಬಿಜಿನೆಸ್ ರ್ಯಾಂಕಿಂಗ್ನಲ್ಲಿ ದೇಶದಲ್ಲಿ ಮೊದಲ ಸ್ಥಾನ ಪಡೆಯಲಿದೆ. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿರುವ ರಾಜ್ಯ ಸರ್ಕಾರ, ಇಒಡಿ ಬಿಜಿನೆಸ್ನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡ್ಗೆ ಅಧಿಕಾರಿಗಳನ್ನು ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ.
ಈಗಾಗಲೆ ತರಬೇತಿಯಾಗಿದೆ: ಇಒಡಿ ಬಿಜಿನೆಸ್ಗಾಗಿ ಉದ್ಯಮಸ್ನೇಹಿ ವಾತಾವರಣ ನಿರ್ವಿುಸುವ ಕುರಿತು ಬೆಸ್ಕಾಂ, ಬಿಬಿಎಂಪಿ, ಜಲಮಂಡಳಿ, ಕೈಗಾರಿಕಾ ಇಲಾಖೆ ಸೇರಿ ಒಟ್ಟು 7 ಸರ್ಕಾರಿ ಸಂಸ್ಥೆ ಮತ್ತು ಇಲಾಖೆಗಳ ತಲಾ 3 ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ನ್ಯೂಜಿಲೆಂಡ್ನ ಹೈಕಮಿಷನ್ ನೇಮಿಸಿದ ತಂಡ ಕಳೆದ ಕೆಲ ತಿಂಗಳ ಹಿಂದೆ ಅಧಿಕಾರಿಗಳು ತರಬೇತಿ ನೀಡಿದ್ದಾರೆ.
ನ್ಯೂಜಿಲೆಂಡ್ ಪ್ರವಾಸ: ನ್ಯೂಜಿಲೆಂಡ್ ಹೈಕಮಿಷನ್ ನೀಡಿರುವ ತರಬೇತಿಯಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳನ್ನು ನ್ಯೂಜಿಲೆಂಡ್ಗೆ ಕಳುಹಿಸಲು ನಿರ್ಧರಿಸಲಾಗಿದೆ. ಅಲ್ಲಿಗೆ ತೆರಳಿ ಅಲ್ಲಿ ಉದ್ಯಮ ಸ್ಥಾಪನೆಗೆ ಇರುವ ಅವಕಾಶಗಳು, ವ್ಯವಸ್ಥೆಗಳ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಜತೆಗೆ, ಅವುಗಳನ್ನು ತಮ್ಮ ಇಲಾಖೆಗಳಲ್ಲಿ ಯಾವ ರೀತಿ ಅಳವಡಿಸಿಕೊಳ್ಳಬಹುದು ಎಂಬುದನ್ನು ನಿರ್ಧರಿಸುವಂತೆಯೂ ಹೇಳಲಾಗಿದೆ.
ಒಂದೆಡೆ ಹಲವು ಅನುಮತಿ
ಬೆಂಗಳೂರಿನಲ್ಲಿ ಯಾವುದೇ ಉದ್ಯಮ ಆರಂಭಿಸ ಬೇಕಾದರೂ, ಹಲವು ಇಲಾಖೆಗಳಿಂದ ಅನುಮತಿ ಪಡೆಯಬೇಕು. ಅದರಿಂದ ಉದ್ಯಮಿಗಳು ಇಲಾಖೆಗಳ ನಡುವೆ ಅಲೆಯಲಾಗದೆ ಬೆಂಗಳೂರನ್ನು ಬಿಟ್ಟು ಬೇರೆ ನಗರಗಳತ್ತ ಮುಖ ಮಾಡುವಂತಾಗಿದೆ. ಅದನ್ನು ಸರಿಪಡಿಸಿ ಒಂದೇ ಕಡೆ ಎಲ್ಲ ಇಲಾಖೆಗಳ ಅನುಮತಿ ಸಿಗುವಂತೆ ಮಾಡಲು ನಿರ್ಧರಿಸಲಾಗಿದೆ.
ಬಂಡವಾಳ ಆಕರ್ಷಣೆಗೆ ಸುಲಭ
ವಿಶ್ವಸಂಸ್ಥೆ ನಿಗದಿ ಮಾಡಿರುವಂತೆ ಭಾರತದ 4 ನಗರಗಳು ಇಒಡಿ ಬಿಜಿನೆಸ್ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ಸ್ಪರ್ಧೆ ನಡೆಸುತ್ತಿವೆ. 2020ರ ಅಂತ್ಯದ ವೇಳೆಗೆ ವಿಶ್ವಸಂಸ್ಥೆ ನಿಯೋಜಿಸುವ ತಂಡಗಳು ಸ್ಪರ್ಧೆ ನಡೆಸುತ್ತಿರುವ ಭಾರತದ ನಾಲ್ಕು ನಗರಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿ ರ್ಯಾಂಕ್ಗಳನ್ನು ನೀಡಲಾಗುತ್ತದೆ. ಇದರಿಂದ ಬಂಡವಾಳ ಆಕರ್ಷಣೆ ಸುಲಭವಾಗಲಿದೆ.
ಎಫ್ಡಿಐಗೆ ಅನುಕೂಲ
ದೇಶದಲ್ಲಿ ಪ್ರಮುಖ ನಗರಗಳಿಗೆ ವಿದೇಶಿ ಬಂಡವಾಳ ಸೆಳೆಯಲು ಈಸ್ ಆಫ್ ಡೂಯಿಂಗ್ ಬಿಜಿನೆಸ್ ಸಹಕಾರಿಯಾಗಲಿದೆ. ಉದ್ಯಮ ಸ್ಥಾಪನೆ ಸರಳವಾದರೆ, ಉದ್ಯಮಿಗಳು ದೇಶದ ನಗರಗಳತ್ತ ಬರಲಿವೆ. ಪ್ರಮುಖವಾಗಿ ನೇರ ಬಂಡವಾಳ ಹೂಡಿಕೆಗೆ ಈ ವ್ಯವಸ್ಥೆ ಸಹಕಾರಿಯಾಗಲಿದೆ.
ಗಿರೀಶ್ ಗರಗ