

ವಿಜಯವಾಣಿ ಸುದ್ದಿಜಾಲ ಧಾರವಾಡ
ಹೊರಗೆ ತಣ್ಣನೆಯ ಚಳಿ ಮೈಗೆ ಅಪ್ಪಳಿಸುತ್ತಿದ್ದರೆ, ಸಭಾಭವನದ ಒಳಗೆ ಕಲಾವಿದರ ಸಂಗೀತದ ಮಾಧುರ್ಯ ಪ್ರೇಕ್ಷಕರ ಮನಮುಟ್ಟುತ್ತಿತ್ತು. ಸಭಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರು ಚಳಿಯನ್ನೂ ಲೆಕ್ಕಿಸದೆ ಸಿತಾರ ವಾದನ ಹಾಗೂ ಗಾಯನಕ್ಕೆ ತಲೆದೂಗಿದರು.
ಧಾರವಾಡ ಘರಾಣೆ ಸಂಸ್ಥಾಪಕ ಸಿತಾರ ರತ್ನ ರಹಿಮತ್ ಖಾನರ 70ನೇ ಪುಣ್ಯತಿಥಿ ಹಾಗೂ ಸಿತಾರ ರತ್ನ ಸಮಿತಿ ಅಮೃತ ಮಹೋತ್ಸವ ನಿಮಿತ್ತ ಭಾನುವಾರದಿಂದ ಏರ್ಪಡಿಸಿರುವ ಸಪ್ತ ದಿನಗಳ ಸಂಗೀತೋತ್ಸವದಲ್ಲಿ ಕಂಡು ಬಂದ ದೃಶ್ಯವಿದು.
ನವದೆಹಲಿಯ ಸಂತೂರ ವಾದಕ ಅಭಯ ಸೊಪೋರಿ ಅವರು ಸ್ವಂತ ರಚನೆಯ ಭಗವತಿ ರಾಗದೊಂದಿಗೆ ಕಾರ್ಯಕ್ರಮ ಆರಂಭಿಸಿದರು. ನಂತರ ಆಲಾಪ್, ಜೋಡ್, ಝಾಲಾ ಹಾಗೂ ಝಪ್ ತಾಲದಲ್ಲಿ ಗತ್ ನುಡಿಸಿ ಪ್ರೇಕ್ಷಕರನ್ನು ಮನಸೂರೆಗೊಳಿಸಿದರು. ಇವರಿಗೆ ಪಂ. ರಾಜೇಂದ್ರ ನಾಕೋಡ ತಬಲಾ ಸಾಥ್ ನೀಡಿದರು.
ಬಳಿಕ ಹಿರಿಯ ಗಾಯಕ ಪಂ. ಎಂ. ವೆಂಕಟೇಶಕುಮಾರ ಅವರು ಮಾರವಾ ರಾಗದ ಮೂಲಕ ಆರಂಭಿಸಿ, ಧೃತ್ ತೀನತಾಲ್ದಲ್ಲಿ ಗಜರೆ ಬನಕರ್ ಆಯಿ.. ಬಂದಿಶ್, ರಾಗ ಮಾರುಬಿಹಾಗದಲ್ಲಿ ಮನ ಮೇ ರಹೋ..., ಜೋಗ ರಾಗ, ವಿಲಂಬಿತ್ ಏಕತಾಲ್ದಲ್ಲಿ ಬಿರಜನ ಕೊ ಪಿರಮಾ... ಪ್ರಸ್ತುತಪಡಿಸಿದರು. ಶಾಂತಲಿಂಗಪ್ಪ ದೇಸಾಯಿ ತಬಲಾ ಹಾಗೂ ನರೇಂದ್ರ ನಾಯಕ ಹಾರ್ಮೋನಿಯಂ ಸಾಥ್ ನೀಡಿದರು.
ಇದಕ್ಕೂ ಪೂರ್ವದಲ್ಲಿ ಸಿತಾರ ರತ್ನ ಸಮಿತಿ ಪದಾಧಿಕಾರಿಗಳು ಸಮಾರಂಭ ಉದ್ಘಾಟಿಸಿದರು. ರಾಘವೇಂದ್ರ ಆಯಿ, ಉಸ್ತಾದ್ ಛೋಟೆ ರಹಮತ ಖಾನ್, ರಫೀಕ ಖಾನ್, ಶಫೀಕ್ ಖಾನ್, ರಯೀಸ್ ಖಾನ್, ಹಫೀಜ್ ಖಾನ್, ಮೊಹಸಿನ್ ಖಾನ್, ಇತರರು ಇದ್ದರು.