ಸಿಡಿಲಿಗೆ ಏಳು ಆಕಳುಗಳು ಬಲಿ

SIDILU
Published on

ಸಿದ್ದಾಪುರ: ಮರದಡಿ ಮೇಯುತ್ತಿದ್ದ ಏಳು ಆಕಳುಗಳು ಸಿಡಿಲಿಗೆ ಬಲಿಯಾದ ಘಟನೆ ಪಟ್ಟಣ ಸಮೀಪದ ಕೊಂಡ್ಲಿ ಗ್ರಾಮದ ಕೊಪ್ಪದಲ್ಲಿ ಶನಿವಾರ ನಡೆದಿದೆ. ಐದು ಗಬ್ಬದ ಹಾಗೂ ಎರಡು ಆಕಳು ಮಣಕ ಆಗಿದ್ದು, ಎಲ್ಲವೂ ಮಲೆನಾಡ ಗಿಡ್ಡ ತಳಿಗಳು.

ಬೂರಿಯಾ ಕನ್ನ ನಾಯ್ಕ ಅವರ ಎರಡು, ನಾರಾಯಣ ರಾಮ ನಾಯ್ಕ ಅವರ ಎರಡು, ನಾರಾಯಣ ಕನ್ನ ನಾಯ್ಕ, ಗಣಪತಿ ಕನ್ನ ನಾಯ್ಕ ಲಕ್ಷ್ಮಣ ಗೋವಿಂದ ನಾಯ್ಕ ಅವರ ತಲಾ ಒಂದು ಆಕಳು ಮೃತಪಟ್ಟಿವೆ.

ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಿವೇಕ ಹೆಗಡೆ ಹಾಗೂ ಶಿರಸಿಯ ಪ್ರಾದೇಶಿಕ ಸಂಶೋಧನಾ ಪ್ರಾಣಿ ರೋಗ ತಜ್ಞ ಡಾ. ಗಣೇಶ ಹೆಗಡೆ ಅವರು ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಿದರು. ಅಧಿಕಾರಿಗಳ ಸಮಕ್ಷಮ ಅಂತ್ಯ ಸಂಸ್ಕಾರ ನಡೆಸಲಾಯಿತು.

ಎಲ್ಲ ಆಕಳು ಆರೋಗ್ಯವಾಗಿದ್ದವು. ಐದು ಆಕಳು ಒಂದೆರಡು ತಿಂಗಳಲ್ಲಿ ಕರುಹಾಕುತ್ತಿದ್ದವು ಎಂದು ಡಾ.ವಿವೇಕ ಹೆಗಡೆ ತಿಳಿಸಿದ್ದಾರೆ.

ಅತಿ ಮುದ್ದಿನಿಂದ ಆಕಳು ಸಾಕಿದ್ದೇವು ಎಂದು ರೈತರು ಕಣ್ಣೀರಿಟ್ಟರು. ಮರಕ್ಕೆ ಹೊಡೆದ ಸಿಡಿಲು ಆಕಳುಗಳಿಗೂ ತಗುಲಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಕಳುಗಳ ಮಾಲೀಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net